ಹಾವೇರಿ: ರಾಜ್ಯ ಚುನಾವಣಾ ಆಯೋಗವು ಏಪ್ರಿಲ್ 2022 ರಿಂದ ಜುಲೈ -2022ರ ಅವಧಿಗೆ ಮುಕ್ತಾಯವಾಗಲಿರುವ ಗ್ರಾಮ ಪಂಚಾಯತಿಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ಘೋಷಿಸಿದೆ.
ಹಾವೇರಿ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ತೆರವಾದ ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ, ಹಿರೇಕೆರೂರು ತಾಲೂಕಿನ ಬೆಟಕೇರೂರ ಗಾ.ಪಂ. ಒಂದು ಸ್ಥಾನಕ್ಕೆ, ಚಿಕ್ಕೇರೂರ ಗ್ರಾಮ ಪಂಚಾಯತ ಒಂದು ಸ್ಥಾನಕ್ಕೆ, ರಟ್ಟಿಹಳ್ಳಿ ತಾಲೂಕಿನ ಚಿಕ್ಕಯಡಚಿ ಗ್ರಾಮ ಪಂಚಾಯತಿ ಒಂದು ಸ್ಥಾನಕ್ಕೆ ಹಾಗೂ ಹಾನಗಲ್ ತಾಲೂಕಿನ ಹಿರೂರು ಗ್ರಾಮ ಪಂಚಾಯತಿ ಒಂದು ಸ್ಥಾನ ಸೇರಿದಂತೆ ಒಟ್ಟು ಐದು ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.
ತೆರವಾದ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಮೇ 5 ರಂದು ಗುರುವಾರ ಅಧಿಸೂಚನೆ ಹೊರಡಿಸಲಿದ್ದಾರೆ. ಅದೇ ದಿನ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 10 ರಂದು ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 11 ರಂದು ಬುಧವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 13 ರಂದು ಶುಕ್ರವಾರ ನಾಮಪತ್ರ ಹಿಂಪಡೆಯುವ ಕೊನೆಯ ದಿನ. ಮೇ 20 ರಂದು ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮೇ 21 ರಂದು ಶನಿವಾರ ಮರು ಮತದಾನಕ್ಕೆ ಸಮಯ ನಿಗಧಿಪಡಿಸಲಾಗಿದೆ. ಮೇ 22 ರಂದು ಬೆಳಿಗ್ಗೆ 8 ಗಂಟೆಯಿಂದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಜರುಗಲಿದೆ. ಮೇ 22ರ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.




