ತುಮಕೂರು ಜಿಲ್ಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬಹು ನಿರೀಕ್ಷಿತವಾದ, ಅಲಂಕಾರಿಕ ಜಲಚರ ಪ್ರಪಂಚವನ್ನು ಪರಿಚಯಿಸುವ ನವೀಕೃತ ಜಿಲ್ಲಾ ಮತ್ಸ್ಯಾಲಯ ಇದೀಗ ಲೋಕಾರ್ಪಣೆಯಾಗಿದ್ದು, ಜನರ ಕಣ್ಗಳನ್ನು ಸೆಳೆಯುತ್ತಿದೆ.
ಸೋಮವಾರದಂದು ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದ ಹತ್ತಿರ ನಿರ್ಮಿಸಲಾದ ಈ ಮತ್ಸ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಲೋಕಾರ್ಪಣೆ ಮಾಡಿದರು.
ಈ ಮತ್ಸ್ಯಾಲಯವು ಮಕ್ಕಳಿಗೆ ಕಲಿಕೆಯ ಜೊತೆಗೆ ಮನರಂಜನೆ ನೀಡುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸುವ ದೊಡ್ಡ ಹೆಜ್ಜೆ. ಜಲಚರ ಜೀವಿಗಳ ಆಹಾರ ಸರಪಳಿಯ ತತ್ವವನ್ನು ಮಕ್ಕಳಿಗೆ ಈ ಮೂಲಕ ಪರಿಚಯಿಸಬಹುದು.ಅಂತ ಡಾ. ಜಿ. ಪರಮೇಶ್ವರ ಹೇಳಿದರು.
ಸಾರ್ವಜನಿಕರಿಗೆ ಈ ಮತ್ಸ್ಯಾಲಯವನ್ನು ವೀಕ್ಷಿಸಲು ಕೇವಲ ₹10 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಮತ್ಸ್ಯಾಲಯಕ್ಕೆ ಪೂರ್ಣ ಉಚಿತ ಪ್ರವೇಶವಿದೆ.
ಇದು ಖಂಡಿತವಾಗಿಯೂ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಬಗೆಯ ಸಾಂಸ್ಕೃತಿಕ ಯೋಜನೆ ಎನ್ನಬಹುದು.
ಮತ್ಸ್ಯಾಲಯದಲ್ಲಿ 36 ಅಕ್ವೇರಿಯಂಗಳನ್ನು ಹೊಂದಿದ್ದು, ಸುಮಾರು 70ಕ್ಕೂ ಹೆಚ್ಚು ಅಲಂಕಾರಿಕ ಮೀನುಗಳ ಪ್ರಬೇಧಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಮತ್ಸ್ಯಗಳು ಭಾರತೀಯ ಹಾಗೂ ವಿದೇಶಿ ಮೂಲದವಾಗಿದ್ದು, ವಿವಿಧ ಬಣ್ಣ, ಆಕಾರ ಮತ್ತು ನಡವಳಿಕೆಗಳನ್ನು ಹೊಂದಿವೆ.ಇದರ ನವೀಕರಣಕ್ಕೆ ಸುಮಾರು ₹15 ಲಕ್ಷ ವೆಚ್ಚವಾಗಿದೆ.
ಮುಂದಿನ ಹಂತದಲ್ಲಿ, ಮಕ್ಕಳಿಗೆ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ₹12 ಲಕ್ಷ ವೆಚ್ಚದಲ್ಲಿ ಕನಿಷ್ಠ 40 ಆಸನಗಳ ‘ಆಂಪಿ ಥಿಯೇಟರ್’ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.




