ಬೆಂಗಳೂರು: ಕೊನೆಗೂ ಸಚಿವ ಕೆ.ಎಸ್ ಈಶ್ವರಪ್ಪ ಒತ್ತಡಕ್ಕೆ ಮಣಿದಿದ್ದಾರೆ. ಈ ಮೂಲಕ ಮೂರು ದಿನಗಳ ಬಳಿಕ ಪಟ್ಟು ಸಡಿಲಿಸಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಹೌದು.. ಕಳೆದ ಮೂರು ದಿನಗಳಿಂದ ರಾಜೀನಾಮೆ ನೀಡದೆ ದೂರ ಉಳಿದಿದ್ದ ಕೆಎಸ್ ಈಶ್ವರಪ್ಪ ಅವರ ನಡೆಯಿಂದ, ಸರ್ಕಾರಕ್ಕೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು. ಅಲ್ಲದೇ ವಿಪಕ್ಷ ಕಾಂಗ್ರೆಸ್ ನಾಯಕರ ಪ್ರತಿಭಟನೆಯಿಂದ ಪಕ್ಷ, ಸರ್ಕಾರಕ್ಕೆ ಡ್ಯಾಮೇಜ್ ಕೂಡ ಆಗುವಂತೆ ಆಗಿತ್ತು. ಇದರಿಂದಾಗಿ ಕೇಸರಿ ಪಡೆಯಲ್ಲಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯ ಹೆಚ್ಚಾಗಿತ್ತು ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಕಾರಣದಿಂದ ಈಶ್ವರಪ್ಪ ರಾಜೀನಾಮೆ ಪಡೆದುಕೊಳ್ಳುವುದು ಸೂಕ್ತವೆಂಬ ಒಮ್ಮತಕ್ಕೂ ಬಿಜೆಪಿ ನಾಯಕರು ಬಂದಿದ್ದರು. ಅಲ್ಲದೇ ಸಿಎಂ ಬಸವರಾಜ್ ಬೊಮ್ಮಾಯಿ ಮೇಲೆ ಈ ಸಂಬಂಧ ಒತ್ತಡ ಹೆಚ್ಚಾಗಿತ್ತು. ಅಂತಿಮವಾಗಿ ಸಿಎಂ ಜೊತೆ ಚರ್ಚಿಸಿ ರಾಜೀನಾಮೆಯನ್ನು ಈಶ್ವರಪ್ಪ ಘೋಷಿಸಿದ್ದಾರೆ. ಈ ಮೂಲಕ ಪಕ್ಷ, ಸರ್ಕಾರಕ್ಕೆ ಆಗುವ ಡ್ಯಾಮೇಜ್ ತಪ್ಪಿಸಲು ಕೊನೆಗೂ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಾಳೆ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ.




