ಬೆಂಗಳೂರು: ಪಕ್ಷಕ್ಕೆ ಮುಜುಗರವಾಗಬಾರದು ಎಂಬುದಾಗಿ ತುಂಬಾ ಯೋಚನೆ ಮಾಡಿ ಈಶ್ವರಪ್ಪ ಸಚಿವಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅವರ ರಾಜೀನಾಮೆಗೆ ಹೈಕಮಾಂಡ್ ನಿಂದ ಯಾವುದೇ ಒತ್ತಡ ಇರಲಿಲ್ಲ ಎಂಬುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ಈಶ್ವರಪ್ಪ ನನಗೆ ದೂರವಾಣಿ ಕರೆ ಮಾಡಿದ್ದರು. ಆ ವೇಳೆ ರಾಜೀನಾಮೆ ಕೊಡುತ್ತೇನೆ ಅಂತಾ ಹೇಳಿದ್ದರು. ಒಂದು ವೇಳೆ ರಾಜೀನಾಮೆ ಕೊಡದೆ ಇದ್ರೆ ಪಕ್ಷದಲ್ಲಿ ಇರಿಸುಮುರಿಸಾಗಬಹುದು. ಹೀಗಾಗಿ ನನ್ನ ಮೇಲೆ ನನಗೆ ನಂಬಿಕೆ ಇದೆ. ಸಂಪೂರ್ಣ ತನಿಖೆ ಬಳಿಕ ಉತ್ತರ ಕೊಡುತ್ತೇನೆ ಅಂತಾ ಈಶ್ವರಪ್ಪ ಹೇಳಿದ್ದಾರೆ ಎಂದರು.
ತುಂಬಾ ಯೋಚನೆ ಮಾಡಿಯೇ ಈಶ್ವರಪ್ಪ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ಇಲ್ಲದೇ ಇದ್ದರೆ ವಿರೋಧ ಪಕ್ಷಕ್ಕೆ ಮಾತನ್ನಾಡಲು ಅವಕಾಶ ಮಾಡಿಕೊಟ್ಟಂತಾಗಲಿದೆ. ಹಾಗಾಗಿ ಸರ್ಕಾರಕ್ಕೆ ಮುಜುಗರ ಆಗೋದು ಬೇಡ ಅಂತ ಈ ನಿರ್ಧಾರ ಮಾಡಿದ್ದಾರೆ. ರಾಜೀನಾಮೆಗೆ ಹೈಕಮಾಂಡ್ ನಿಂದ ಯಾವುದೇ ಒತ್ತಡ ಇರಲಿಲ್ಲ. ಸಂತೋಷ್ ಪಾಟೀಲ್ ಆತ್ಮಹತ್ಯೆಯ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯ ವರದಿ ಬಂದ ಬಳಿಕ ಉನ್ನತ ತನಿಖೆ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.




