ದೀಪಾವಳಿ ಹಬ್ಬ ಮುಗಿದ ಬಳಿಕವೂ, ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಈ ದೀಪಾವಳಿ ಶುಭ ತಂದಿದೆ ಎಂದು ಚಿನ್ನಾಭರಣ ಪ್ರಿಯರು ಖುಷಿಪಡುತ್ತಿದ್ದಾರೆ. ಗುರುವಾರವೂ ಬಂಗಾರದ ದರ ಬರೋಬ್ಬರಿ 810 ರೂಪಾಯಿ ಇಳಿಕೆ ಆಗಿದೆ.
ಅಕ್ಟೋಬರ್ 23ರ ಗುರುವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 12,508 ರೂಪಾಯಿ ಇದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,25,080 ರೂಪಾಯಿ ಇದೆ. 22 ಕ್ಯಾರೆಟ್ 1 ಗ್ರಾಂ ಬೆಲೆಗೆ 11,465 ರೂಪಾಯಿ ಇದ್ದು, 10 ಗ್ರಾಂನ ಬೆಲೆ 1,14,650 ರೂಪಾಯಿ ಇದೆ.
ಬೆಂಗಳೂರಲ್ಲಿ 1 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 12,508 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,25,080 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ. ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಬೆಳ್ಳಿ ಬೆಲೆ ಇಂದು 4.90 ರೂಪಾಯಿ ಇಳಿಕೆ ಆಗಿದ್ದು, 1 ಗ್ರಾಂನ ಬೆಲೆ 159 ರೂ. ಇದ್ದು, ಕೆಜಿಗೆ 1,59,000 ರೂ ಇದೆ.
ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡ ನಂತರ, ಹೂಡಿಕೆದಾರರು ತಮ್ಮ ಲಾಭ ಮಾಡಿಕೊಳ್ಳಲು ಮುಂದಾಗಿದ್ದೂ ಕೂಡ, ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಚಿನ್ನದಂತಹ ಅಮೂಲ್ಯ ಲೋಹಗಳಲ್ಲಿ ಮಾರಾಟದ ಮಾದರಿಯು ಜಾಗತಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆ ಕಡಿಮೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಇತ್ತೀಚಿನ ಏರಿಕೆಯಿಂದ ಲಾಭ ಪಡೆದ ಹೂಡಿಕೆದಾರರು ಮಾರುಕಟ್ಟೆಯಿಂದ ಹೊರಬರಲು ಬಾಂಡ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.
2025ರ ಅಕ್ಟೋಬರ್ 20ರಂದು, ಅಮೆರಿಕಾ ಮತ್ತು ಚೀನಾ ನಡುವಿನ ಮಾತುಕತೆಗಳ ಬಗ್ಗೆ ಇರುವ ಉದ್ವಿಗ್ನತೆ ಮತ್ತು ಅಮೆರಿಕಾ ಡಾಲರ್‌ನ ಪುನಶ್ಚೇತನದಿಂದಾಗಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಆದರೆ, ನಂತರದ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಯಿತು. ಮಾರುಕಟ್ಟೆ ತಜ್ಞರ ಪ್ರಕಾರ, ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆಗಳು ಕಡಿಮೆಯಾಗುವ ನಿರೀಕ್ಷೆ ಮತ್ತು ಅಮೆರಿಕಾ ಡಾಲರ್‌ನ ಬಲವರ್ಧನೆಯೇ, ಚಿನ್ನದ ಬೆಲೆಯಲ್ಲಿನ ನಷ್ಟಕ್ಕೆ ಮುಖ್ಯ ಕಾರಣ ಎಂದಿದ್ದಾರೆ. ಮುಂಬರುವ ವಹಿವಾಟುಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

