ಬಿಹಾರದಲ್ಲಿ ಸೀಟು ಹಂಚಿಕೆ ಜಗಳ ಮುಂದುವರೆದಿದ್ರೂ, ಮುಂಬರುವ ವಿಧಾನಸಭೆ ಚುನಾವಣೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು, ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲು, ಒಮ್ಮತ ಮೂಡಿದೆ. ಆರ್‌ಜೆಡಿ ಮೂಲಗಳ ಪ್ರಕಾರ, ಮಹಾಘಟಬಂಧನ್‌ನ ಎಲ್ಲಾ ಪಕ್ಷಗಳು ತೇಜಸ್ವಿ ಯಾದವ್ ನಾಯಕತ್ವವನ್ನು ಬೆಂಬಲಿಸಲು ಒಪ್ಪಿಕೊಂಡಿವೆಯಂತೆ. ಈ ಬಗ್ಗೆ ಇಂದು ಔಪಚಾರಿಕ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ತೇಜಸ್ವಿ ಯಾದವ್ ನಾಯಕತ್ವದಲ್ಲಿ “ಚಲೋ ಬಿಹಾರ, ಬದ್ಲೇ ಬಿಹಾರ ಎಂಬ ಪ್ರಚಾರದ ಘೋಷಣೆಯನ್ನೂ ಬಿಡುಗಡೆ ಮಾಡಲಿವೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು, ಮಹತ್ವದ ಬೆಳವಣಿಗೆ ನಡೆದಿದೆ.
ಸೀಟು ಹಂಚಿಕೆ ಮಾತುಕತೆಗಳು ಕೊನೆಯ ಕ್ಷಣದವರೆಗೂ ಮುಂದುವರಿದಿವೆ. ಬಿಕ್ಕಟ್ಟನ್ನು ಬಗೆಹರಿಸುವ ಕೊನೆ ಪ್ರಯತ್ನವಾಗಿ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಾಟ್ನಾಕ್ಕೆ ಭೇಟಿ ನೀಡಿದ್ದರು. ಮೈತ್ರಿ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸಿದ್ರು. ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆ. ಆರ್.ಜೆ.ಡಿ., ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳನ್ನು ಒಳಗೊಂಡಿರುವ ಮೈತ್ರಿಕೂಟದಲ್ಲಿ, ಸುಮಾರು 1 ಡಜನ್ ಸೀಟುಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಪ್ರಯತ್ನಿಸಿದ್ದಾರೆ.
ಮೊದಲ ಹಂತದ ಚುನಾವಣೆ ನಡೆಯಲಿರುವ ಬಚ್‌ವಾರ, ರಾಜಪಾಕರ್ ಮತ್ತು ಬಿಹಾರ ಷರೀಫ್ ಕ್ಷೇತ್ರಗಳಲ್ಲಿ, ನಾಮಪತ್ರ ಹಿಂಪಡೆಯಲು ಅವಕಾಶ ಮುಗಿದಿದೆ. ಲಾಲ್‌ಗಂಜ್‌ನಲ್ಲಿ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂಪಡೆದುಕೊಂಡಿದೆ. ಪ್ರಣ್‌ಪುರ ಮತ್ತು ಇತರ ಕೆಲವು ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಪರವಾಗಿ, ಒಬ್ಬರೇ ಅಭ್ಯರ್ಥಿ ಸ್ಪರ್ಧಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆರ್.ಜೆ.ಡಿ. ಸೋಮವಾರ ತನ್ನ 143 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ರೆ, ಕಾಂಗ್ರೆಸ್ 61 ಅಭ್ಯರ್ಥಿಗಳನ್ನು ಘೋಷಿಸಿದೆ. ನವೆಂಬರ್ 6ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಮೈತ್ರಿಕೂಟ ಪ್ರಯತ್ನಿಸುತ್ತಿದೆ. ಇಂಡಿಯಾ ಬ್ಲಾಕ್‌ನ ಈ ಎರಡೂ ಮಿತ್ರ ಪಕ್ಷಗಳು ಆರು ಕ್ಷೇತ್ರಗಳಲ್ಲಿ ನೇರವಾಗಿ ಸ್ಪರ್ಧಿಸಲಿವೆ.

