Friday, July 18, 2025

Latest Posts

ಅವರಿಬ್ಬರ ಮಕ್ಕಳಷ್ಟೇ ಬೆಳೀಬೇಕು ; ಬಿಎಸ್‌ವೈ, ಸಿದ್ದು ವಿರುದ್ಧ ಬೆಂಕಿಯುಗುಳಿದ ಯತ್ನಾಳ್  : ಸಿದ್ದರಾಮಯ್ಯ, ಯಡಿಯೂರಪ್ಪ ನಡುವೆ ಅಡ್ಜಸ್ಟ್‌ಮೆಂಟ್‌ ರಾಜಕೀಯ ಎಂದ ಫೈರ್‌ ಬ್ರ್ಯಾಂಡ್!

- Advertisement -

ಬೆಂಗಳೂರು : ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಇದೀಗ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧಿಸಿದ್ದಾಗ ಯಡಿಯೂರಪ್ಪ ಮೈಸೂರು ಭಾಗದಲ್ಲಿ ಪ್ರಭಾವೀ ಲಿಂಗಾಯತ ನಾಯಕನಾಗಿದ್ದರೂ ಭಾಷಣ ಮಾಡದೆ ಏನೋ ಸಬೂಬು ಹೇಳಿ ತಪ್ಪಿಸಿಕೊಂಡರು ಎಂದು ಆರೋಪಿಸಿದ್ದಾರೆ. ಅಲ್ಲದೆ ಶಿಕಾರಿಪುರದಲ್ಲಿ ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಒಬ್ಬ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿದ್ದರು. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ತಮ್ಮ ಮಗ ಯತೀಂದ್ರರನ್ನು ಹಾಗೂ ಯಡಿಯೂರಪ್ಪಗೆ ಮಗ ವಿಜಯೇಂದ್ರನನ್ನು ಬೆಳೆಸಬೇಕಾಗಿದೆ ಎಂದು ಟೀಕಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅವರಿಬ್ಬರ ಮಕ್ಕಳಷ್ಟೇ ಬೆಳೆಯಬೇಕು, ಇನ್ಯಾರು ಅಲ್ಲಿ ಏಳ್ಗೆ ಕಾಣಬಾರದು, ಕುಮಾರ್‌ ಬಂಗಾರಪ್ಪ, ಹಾಲಪ್ಪ ಅವರೂ ಬೆಳೆಯಬಾರದು. ಅವರ ಮನೆಯಲ್ಲಿನ ಗುಮಾಸ್ತನಂತೆ ಇರಬೇಕು. ಶಿವಮೊಗ್ಗದಲ್ಲಿ ಶಾಸಕರಾಗಿದ್ದ ಅಶೋಕ್‌ ನಾಯಕ್‌ ಎನ್ನುವವರು ನಮಗೆ, ಒಬ್ಬ ಸಿಪಾಯಿಯನ್ನೂ ಕೂಡ ಟ್ರಾನ್ಸ್‌ಫರ್ ಮಾಡೋಕೆ ಆಗುವುದಿಲ್ಲ ಅಂತ ಹೇಳುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಕುಮಾರ ಬಂಗಾರಪ್ಪ ಅವರ ಹೋರಾಟದಿಂದಲೇ ರಾಘವೇಂದ್ರ ಸಂಸದರಾಗಿದ್ದಾರೆ. ಇಲ್ಲದಿದ್ದರೆ ಈ ಬಾರಿ ಔಟ್‌ ಆಗಿ ಹೋಗುತ್ತಿದ್ದರು, ಆದರೆ ದುರ್ದೈವದಿಂದ ಅವರು ಆಯ್ಕೆಯಾಗಿದ್ದಾರೆ ಎಂದು ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಹೇಳಿದಂತೆ ಅವರು ಜಿಲ್ಲೆಯ ನಾಯಕರನ್ನು ಮುಗಿಸಿದ್ದಾರೆ. ಅದರಂತೆಯೇ ಸಿದ್ದರಾಮಯ್ಯ ಅವರೂ ಕೂಡ ನಾಯಕರನ್ನು ಮುಗಿಸುತ್ತಿದ್ದಾರೆ. ಇಬ್ಬರೂ ಮುಗಿಸಿದವರೇ ಮೇಲೆ ಬಂದಿದ್ದಾರೆ. ವರುಣಾ ಕ್ಷೇತ್ರದ ಕಥೆ ಹೀಗಾದರೆ, ಇನ್ನೂ ಶಿಕಾರಿಪುರ ಕ್ಷೇತ್ರದಲ್ಲೂ ವಿಜಯೇಂದ್ರ ವಿರುದ್ಧ ವೀಕ್‌ ಕ್ಯಾಂಡಿಡೇಟ್‌ ಹಾಕಿ ಸಿದ್ದರಾಮಯ್ಯ ತಮ್ಮ ಸಮಾಜವನ್ನು ಉದ್ದಾರ ಮಾಡಿಲ್ಲ. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಇಬ್ಬರೂ ಅಡ್ಜಸ್ಟ್‌ಮೆಂಟ್‌ ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್ ಹೊಸ ಬಾಂಬ್‌ ಸಿಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಉತ್ತರಾಧಿಕಾರಿಯಾಗಿ ಅವರ ಮಗನಾದರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಉತ್ತರಾಧಿಕಾರಿ ಅವರ ಮಗನೇ. ಇದು ನಿಲ್ಲಬೇಕೆಂದು ನಮ್ಮ ಹೋರಾಟ ನಡೆಯುತ್ತಿದೆ. ಈ ಇಬ್ಬರೂ ಹೊಂದಾಣಿಕೆ ರಾಜಕೀಯದಿಂದ ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಯತ್ನಾಳ್‌ ಲೇವಡಿ ಮಾಡಿದ್ದಾರೆ.

ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಮಾತ್ರ ರಾಜ್ಯದಲ್ಲಿ ಪಕ್ಷಕ್ಕೆ ಉಳಿಗಾಲವಿದೆ. ನನ್ನನ್ನು ಹೊರಹಾಕಿ ಈಗ ಪಕ್ಷದ ನಾಯಕರು ಪಶ್ಛಾತ್ತಾಪ ಪಡುತ್ತಿದ್ದಾರ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ.

- Advertisement -

Latest Posts

Don't Miss