ಹುಚ್ಚು ಪ್ರೀತಿ ಯಾರತ್ರ ಏನೂ ಬೇಕಾದರೂ ಮಾಡಿಸುತ್ತೆ ಅನ್ನೊದಕ್ಕೆ ಇಲ್ಲೊಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ ನೋಡಿ. ಸಹೋದ್ಯೋಗಿಯು ಪ್ರೀತಿ ಮಾಡುವುದಿಲ್ಲ ಅಂತ ಪ್ರೀತಿ ನಿರಾಕರಿಸಿದಕ್ಕೆ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ಆತನ ಹೆಸರಿನಲ್ಲಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಕಳುಹಿಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಮೂಲದ 30ರ ಹರೆಯದ ರೊಬೊಟಿಕ್ ಇಂಜಿನಿಯರ್ ರೆನೆ ಜೊಶಿಲ್ಡಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ರೆನೆ ಜೋಶಿಲ್ಡಾ ತನ್ನ ಪ್ರೀತಿ ನಿರಾಕರಿಸಿದ ಯುವಕನ ಹೆಸರಿನಲ್ಲಿ ನಕಲಿ ಮೇಲ್ ಐಡಿಗಳನ್ನು ಸೃಷ್ಟಿಸಿದ್ದಳು. ಬಾಂಬ್ ಬೆದರಿಕೆ ಕೃತ್ಯಗಳನ್ನು ನಡೆಸಿ ಪೊಲೀಸರ ಕೈಗೆ ಸಿಗದಂತೆ ಪಾರಾಗಲು ಆಕೆ ತಿಂಗಳ ಕಾಲ ವಿಪಿಎನ್ ಹಾಗೂ ನಕಲಿ ಮೇಲ್ ಐಡಿಗಳನ್ನು ಬಳಸಿದ್ದಳು. ಆದರೆ ಆಕೆ ಮಾಡಿದ ಒಂದೇ ಒಂದು ತಪ್ಪು ಪೊಲೀಸರು ಆಕೆಯ ಮನೆ ಮುಂದೆ ಆಕೆಗಾಗಿ ಕಾಯುವಂತೆ ಮಾಡಿತ್ತು.
ಏನಿದು ಲವ್ ಕಹಾನಿ-
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ರೆನೆ ಜೊಶಿಲ್ಡಾ ತನ್ನ ಇಂಜಿನೀಯರಿಂಗ್ ಪದವಿಯನ್ನು ಚೆನ್ನೈನಲ್ಲಿ ಮಾಡಿದ್ದಳು, ನಂತರ ರೋಬೋಟಿಲ್ ಕೋರ್ಸ್ ಕೂಡ ಮಾಡಿದ್ದಳು . ನಂತರ ಚೆನ್ನೈನ ಡೆಲಾಯ್ಟ್ ಸಂಸ್ಥೆಯಲ್ಲಿ ಸೀನಿಯರ್ ಕನ್ಸ್ಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇದಾದ ನಂತರ ಈಕೆ ಪ್ರಾಜೆಕ್ಟ್‌ವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಿವಿಜ್ ಪ್ರಭಾಕರನ್ ಎಂಬುವವರನ್ನು ಭೇಟಿಯಾಗಿದ್ದು, ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಮೊದಲ ನೋಟದಲ್ಲಿಯೇ ಆಕೆಗೆ ಆತನ ಮೇಲೆ ಪ್ರೀತಿಯಾಗಿದೆ.
ಆದರೆ ಇದು ಒನ್ ಸೈಡ್ ಲವ್ ಆಗಿತ್ತು. ಇತ್ತ ದಿವಿಜ್ ಈಕೆಯ ಭಾವನೆಗಳಿಗೆ ಯಾವುದೇ ಮಣೆ ಹಾಕದೇ ಫೆಬ್ರವರಿಯಲ್ಲಿ ಬೇರೆ ಯುವತಿಯನ್ನು ಮದುವೆಯಾಗಿದ್ದ. ಇದು ರೆನೆ ಜೊಶಿಲ್ಡಾಳನ್ನು ಕೋಪದಿಂದ ಕುದಿಯುವಂತೆ ಮಾಡಿದ್ದು, ಆಕೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ಲು. ಇದಕ್ಕಾಗಿ ಆಕೆ ಹಲವು ನಕಲಿ ಇ ಮೇಲ್ ಐಡಿಗಳನ್ನು ಸಿದ್ಧಪಡಿಸಿ, ಈ ಮೇಲ್‌ಗಳ ಮೂಲಕ ಆಕೆ 11 ರಾಜ್ಯಗಳ ಶಾಲೆ, ಕಾಲೇಜು, ಆಸ್ಪತ್ರೆ, ಕ್ರೀಡಾಕೇಂದ್ರಗಳಿಗೆ ಹುಸಿ ಬಾಂಬ್ ಸಂದೇಶಗಳನ್ನು ಕಳುಹಿಸಿದ್ದಾಳೆ.
ಈ ಚಾಲಕಿ ರೆನೆ ಜೋಶಿಲ್ಡಾ ಅಹಮದಾಬಾದ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 21 ಸ್ಥಳಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಳು. ಇವುಗಳಲ್ಲಿ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣ, ಸರ್ಖೇಜ್‌ನಲ್ಲಿರುವ ಜಿನೀವಾ ಲಿಬರಲ್ ಶಾಲೆ ಮತ್ತು ನಾಗರಿಕ ಆಸ್ಪತ್ರೆ ಸೇರಿವೆ ಎಂದು ಜಂಟಿ ಕಮಿಷನರ್ ಅಹಮದಾಬಾದ್ ಶರದ್ ಸಿಂಘಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಜೊತೆಗೆ ಆಕೆ ಸಾರ್ವಜನಿಕ ಮೆರವಣಿಗೆಗಳು ಮತ್ತು ವಿವಿಐಪಿ ಭೇಟಿಗಳಿಗೆ ಮುಂಚಿತವಾಗಿ 11 ರಾಜ್ಯಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಳು. ಈ ಬೆದರಿಕೆಗಳು ಪೊಲೀಸರು ತುರ್ತಾಗಿ ಪಡೆಗಳನ್ನು ಸಜ್ಜುಗೊಳಿಸಲು ಪ್ರೇರೇಪಿಸಿದವು ನಂತರ ಇವು ಸುಳ್ಳು ಬಾಂಬ್ ಬೆದರಿಕೆ ಸಂದೇಶ ಎಂಬುದು ತಿಳಿದು ಬಂದಿತ್ತು. ಆಕೆ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ದೆಹಲಿ, ಕರ್ನಾಟಕ, ಕೇರಳ, ಬಿಹಾರ, ತೆಲಂಗಾಣ, ಪಂಜಾಬ್, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಗೆ ಹೀಗೆ ನಕಲಿ ಮೇಲ್‌ನಿಂದ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ.
ಇದಷ್ಟೆ ಅಲ್ಲದೆ ಜೂನ್ 12 ರಂದು ನಡೆದ 274 ಜನರನ್ನು ಬಲಿ ಪಡೆದ ಏರ್ ಇಂಡಿಯಾದ ಅಹಮದಾಬಾದ್-ಲಂಡನ್ ವಿಮಾನ ದುರಂತದವನ್ನು ತಾನೇ ಮಾಡಿದ್ದು ಎನ್ನುವಂತೆ ಆಕೆ ಇಮೇಲ್ ಸಂದೇಶದಲ್ಲಿ ಹೇಳಿಕೊಂಡಿದ್ದಳು. ಅಹ್ಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದ ನಂತರ ಕಾಲೇಜು ಆಡಳಿತಕ್ಕೆ ಇಮೇಲ್ ಕಳುಹಿಸಿದ ಈಕೆ ಈಗ ನಿಮಗೆ ಶಕ್ತಿ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾವು ನಿನ್ನೆ ನಿಮಗೆ ಮೇಲ್ ಕಳುಹಿಸಿದಂತೆ, ನಮ್ಮ ಮಾಜಿ ಸಿಎಂ ವಿಜಯ್ ರೂಪಾನಿ ಜೊತೆಗೆ ಏರ್ ಇಂಡಿಯಾ ವಿಮಾನವನ್ನು ಅಪಘಾತಕ್ಕೀಡು ಮಾಡಿದ್ದೇವೆ. ವಿಮಾನ ಅಪಘಾತವು ನಕಲಿ ಎಂದು ಪೊಲೀಸರು ಭಾವಿಸಿ ಅದನ್ನು ನಿರ್ಲಕ್ಷಿಸಿದ್ದರು ಎಂದು ನಮಗೆ ತಿಳಿದಿದೆ. ನಮ್ಮ ಪೈಲಟ್‌ಗೆ ಶುಭವಾಗಲಿ. ಈಗ ನಾವು ಆಟವಾಡುತ್ತಿಲ್ಲ ಎಂದು ನಿಮಗೆ ತಿಳಿದಿದೆ ಎಂದು ಆಕೆ ಸಂದೇಶ ಕಳುಹಿಸಿದ್ದಳು. ಆದರೆ ಈ ಮೇಲ್ ಕಳುಹಿಸುವ ಮೊದಲು ಮಾಡಿದ ಎಡವಟ್ಟು ಆಕೆಯನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ.
ಆ ಒಂದು ಸಣ್ಣ ತಪ್ಪು ಈಕೆ ಪೋಲೀಸ್ ಕೈಯಲ್ಲಿ ಸಿಲುಕಿಕೊಳ್ಳುವಂತೆ ಮಾಡಿತು ಏನದು ಎಡವಟ್ಟು ಅಂತ ಮುಂದೆ ಹೇಳ್ತಾ ಹೋಗ್ತಿನ ಅಹಮದಾಬಾದ್ ಪೊಲೀಸರ ಪ್ರಕಾರ, ರೆನೆ ಜೊಶಿಲ್ಡಾ ಅವರ ತಾಂತ್ರಿಕ ಪರಿಣತಿಯಿಂದಾಗಿ ಬೆದರಿಕೆಗಳನ್ನು ಕಳುಹಿಸುವಾಗ ಅದರ ಮೂಲಗಳನ್ನು ಯಶಸ್ವಿಯಾಗಿ ಆಕೆ ಮರೆ ಮಾಚಿದ್ದಳು.
ಇಮೇಲ್ ಐಡಿಗಳನ್ನು ರಚಿಸಲು ಆಕೆ ಬಳಸುವ ಸಂಖ್ಯೆ ವರ್ಚುವಲ್ ಆಗಿರುತ್ತಿತ್ತು. ಆಕೆ ಟಾರ್ ಬ್ರೌಸರ್ ಅಂದರೆ ಅನಾಮಧೇಯ ಸಂವಹನಕ್ಕಾಗಿ ನೆಟ್‌ವರ್ಕ್ ಮತ್ತು ಡಾರ್ಕ್ ವೆಬ್ ಮೂಲಕ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಳು. ಹೀಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ತುಂಬಾ ಬುದ್ಧಿವಂತಿಕೆಯಿಂದ ಕೃತ್ಯ ಎಸಗಿದ್ದ ಆಕೆ ತನ್ನ ನೆಟ್‌ವರ್ಕ್ ವಿಳಾಸವನ್ನು ಪೊಲೀಸರು ಪತ್ತೆ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಆಕೆ ಸಣ್ಣದೊಂದು ತಪ್ಪು ಮಾಡಿದ್ದಳು. ಇದರಿಂದ ನಮ್ಮ ಸೈಬರ್ ಅಪರಾಧ ವಿಭಾಗವು ಆಕೆ ಇದ್ದ ಸ್ಥಳವನ್ನು ಪತ್ತೆ ಮಾಡಿದೆ. ರೆನೆ ಜೋಶಿಲ್ಡಾ ಆರು ತಿಂಗಳ ಹಿಂದೆ ಒಂದು ತಪ್ಪು ಮಾಡಿದ್ದಳು. ಆ ಒಂದು ತಪ್ಪು ಹೆಜ್ಜೆ ತಪ್ಪು ಮಾಡಿಯೂ ಎಸ್ಕೇಪ್ ಆಗುತ್ತಿದ್ದ ಆಕೆಯನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ. ಆಕೆ ತಾನು ಕೃತ್ಯ ಬಳಸಲು ಬಳಕೆ ಮಾಡುತ್ತಿದ್ದ ಸಾಧನದಿಂದಲೇ ಹಿಂದೊಮ್ಮೆ ಆಕೆ ತನ್ನ ಅಸಲಿ ಇಮೇಲ್ ಖಾತೆಯಿಂದ ಲಾಗಿನ್ ಆಗಿದ್ದಳು. ಇದು ಆಕೆಯ ಐಪಿ ವಿಳಾಸವನ್ನು ಪತ್ತೆ ಮಾಡಲು ಪೊಲೀಸರಿಗೆ ಸಹಾಯ ಮಾಡಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಈ ರೀತಿಯಾಗಿ ಈ ಚಾಲಾಕಿ ಪೋಲೀಸರ ಬಲೆಗೆ ಬಿದ್ದಿದ್ದಾಳೆ.