​ಗಣಂಗೂರು ಟೋಲ್ ಬಳಿ ರೈತರ ಪ್ರತಿಭಟನೆ: ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಸಚಿವ ಚಲುವರಾಯಸ್ವಾಮಿ

Mandya: ರೈತರಿಗೆ ಶಕ್ತಿ ನೀಡುವ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲ ಪಕ್ಷಗಳು ಒಟ್ಟಾಗಿ ಕೇಂದ್ರ ಸರಕಾರದ ಮುಂದೆ ರೈತರ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಆಶ್ವಾಸನೆ ನೀಡಿದರು.

​ಕಬ್ಬಿನ ಬೆಲೆ ಏರಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಗಣಂಗೂರು ಟೋಲ್ ಪ್ಲಾಜಾದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಸಚಿವರು ಮಾತನಾಡಿದರು.

​ರೈತರ ಬಹುತೇಕ ಬೇಡಿಕೆಗಳನ್ನು ಕೇಂದ್ರ ಸರಕಾರ ಈಡೇರಿಸಬೇಕು. ಹೀಗಾಗಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೇಂದ್ರ ಸರಕಾರದ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಮೆಟ್ರೋ, ಜೆಜೆಎಂ ಅನುದಾನ, ಜಿಎಸ್‌ಟಿ ಹಣವನ್ನು ಸಹ ಕೇಂದ್ರ ಸರಕಾರ ನೀಡುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಕೇಂದ್ರ ಸರಕಾರದ ಬಳಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಕ್ಕಪಕ್ಕದ ರಾಜ್ಯಗಳಿಗೆ ನೀಡುವ ಪ್ರಾಮುಖ್ಯತೆಯನ್ನು ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲ. ಕೇಂದ್ರ ಸರಕಾರದ ಮಲತಾಯಿ ಧೋರಣೆಯಿಂದಾಗಿ ರೈತರ ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳುತ್ತಿವೆ ಎಂದು ಸಚಿವರು ಅಸಮಾಧಾನ ಹೊರಹಾಕಿದರು.

​ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಆಡಳಿತದ ವೇಳೆ 79 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು. ಅದನ್ನು ಬಿಟ್ಟರೆ ಬಿಜೆಪಿ ನೇತೃತ್ವದ ಸರಕಾರ ಸಾಲ ಮನ್ನಾ ಮಾಡಿಲ್ಲ. ರೈತರ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಯಾವುದೇ ಯೋಜನೆ ಜಾರಿಗೊಳಿಸಿದರೂ, ರಾಜ್ಯ ಸರಕಾರ ಶೇ. 50 ರಷ್ಟು ಪಾಲುದಾರರಾಗಿ ಸದಾ ರೈತರ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಿದೆ ಎಂದರು.

​ಹಾಲಿನ ದರ ಏರಿಕೆ ಸಂಬಂಧ ಈಗಾಗಲೇ ಸಂಪುಟದಲ್ಲಿ (ಕ್ಯಾಬಿನೆಟ್) ಅನುಮೋದನೆ ದೊರೆತಿದೆ. ಚುನಾವಣಾ ನೀತಿಸಂಹಿತೆ ಮುಕ್ತಾಯಗೊಂಡ ತಕ್ಷಣವೇ ಹಾಲಿನ ದರ ಏರಿಕೆಯಾಗಲಿದೆ ಎಂದು ಭರವಸೆ ನೀಡಿದರು.

​ಯಾವ ಬೆಳೆಗೆ ಎಂಎಸ್‌ಪಿ ನೀಡಬೇಕು ಎಂಬುದನ್ನು ಕೇಂದ್ರ ಸರಕಾರ ನಿರ್ಧಾರ ಮಾಡಲಿದೆ. ಹೀಗಾಗಿ ನಿಮ್ಮೆಲ್ಲರ ಸಹಕಾರವಿದ್ದರೆ, ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ, ಆದಷ್ಟು ಶೀಘ್ರದಲ್ಲೇ ರೈತರ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಪ್ರಯತ್ನ ನಡೆಸಲಾಗುವುದು ಎಂದರು.

​ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಸರಕಾರ ರಚಿಸಿದ್ದೇವೆ. ಇದಕ್ಕಾಗಿಯೇ ಬೆಳಗಾವಿಯಲ್ಲಿ ಈಗಾಗಲೇ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲ ಪಕ್ಷಗಳು ಒಟ್ಟಾಗಿ ರೈತರ ಸಮಸ್ಯೆಗಳನ್ನು ಕೇಂದ್ರ ಸರಕಾರದ ಮುಂದಿಡಲು ನಿರ್ಧರಿಸಲಾಗಿದೆ. ನಾವು ರೈತರೊಂದಿಗೆ ಸದಾ ನಿಲ್ಲುತ್ತೇವೆ ಎಂದರು.

​ಕಬ್ಬಿಗೆ ನೀಡಬೇಕಿರುವ 100 ರೂ. ಪ್ರೋತ್ಸಾಹ ಧನದಲ್ಲಿ ಸಕ್ಕರೆ ಕಾರ್ಖಾನೆಗಳು 50 ರೂ. ಹಾಗೂ ರಾಜ್ಯ ಸರಕಾರ 50 ರೂ. ನೀಡಬೇಕಿದೆ. ರಾಜ್ಯ ಸರಕಾರ ತನ್ನ ಪಾಲನ್ನು ನೀಡುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿವೆ. ಈ ತಡೆಯಾಜ್ಞೆ ರದ್ದುಗೊಳಿಸಲು ರಾಜ್ಯ ಸರಕಾರವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ವಿವರಿಸಿದರು.

​26 ರಂದು ರೈತರೊಂದಿಗೆ ಸಭೆ:
ಇದೇ 26 ರಂದು ರೈತರೊಂದಿಗೆ ಸಭೆ ನಡೆಸಿ, ಅವರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಇಳುವರಿ ಕಡಿಮೆಯಾಗುತ್ತಿರುವ ಬಗ್ಗೆ ರೈತರೇ ಒಂದು ನಿರ್ಧಾರಕ್ಕೆ ಬರಬೇಕು. ಉತ್ತರ ಹಾಗೂ ದಕ್ಷಿಣ ಭಾರತ ಎಂಬ ಕೇಂದ್ರ ಸರಕಾರದ ತಾರತಮ್ಯವನ್ನು ತೊಡೆದುಹಾಕಲು ನಾನು ನಿಮ್ಮೊಂದಿಗೆ ಹೋರಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಸಚಿವರ ಭರವಸೆ ಬೆನ್ನಲೆ, ಪ್ರತಿಭಟನೆ ಹಿಂಪಡೆದ ರೈತರು
​ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ತಡೆದು, ರಸ್ತೆ ತಡೆ ನಡೆಸುತ್ತಿದ್ದ ರೈತರ ಬಳಿ ಮನವಿ ಪತ್ರ ಸ್ವೀಕರಿಸಿದ ಸಚಿವರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

​ಈ ವೇಳೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಂಡಿಸಿದ್ದೇಗೌಡ,ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ರೈತ ಸಂಘಗಳ ಪದಾಧಿಕಾರಿಗಳು ಹಾಗೂ ರೈತರುಗಳಿದ್ದರು.

About The Author