ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಹಾಗೂ ಜೆಡಿಎಸ್ನ ನೂತನ ಸಂಸದರಿಗೆ ಸನ್ಮಾನಿಸಲಾಯಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಬಿಜೆಪಿಯ 17 ಹಾಗೂ ಜೆಡಿಎಸ್ನ ಇಬ್ಬರು ಸಂಸದರನ್ನು ಸನ್ಮಾನ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಇದು ಜನತೆ ನೀಡಿದ ಜನಾದೇಶ, ಸತತ 6-7 ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ಮತದಾರರಿಗೆ ಸುಳ್ಳು ಭರವಸೆ ನೀಡಿದ ಮೇಲೂ ಮೂರಂಕಿ ತಲುಪಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ದುರಾಡಳಿತ ಮತ್ತು ಭ್ರಷ್ಟಾಚಾರ ನಡೆಸಿದೆ. ಗ್ಯಾರೆಂಟಿ ನೆಪದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, 2006ರಲ್ಲಿ ಯಡಿಯೂರಪ್ಪ ಅವರು ನನ್ನನ್ನು ಸಿಎಂ ಆಗಿ ಮಾಡಿದ್ದಕ್ಕೆ ನಾನು ಇಂದು ನಾಡಿಗೆ ಪರಿಚಯ ಆಗಲು ಕಾರಣ ಎಂದು ಹಳೆಯ ದಿನಗಳನ್ನು ನೆನೆದರು. ಅವತ್ತೇ ಎರಡು ಪಕ್ಷದ ಮೈತ್ರಿ ಮುಂದುವರೆದಿದ್ದರೆ ಕಾಂಗ್ರೆಸ್ ಇವತ್ತಿಗೆ ನೆಲಕಚ್ಚಿರುತ್ತಿತ್ತು ಎಂದು ಹೇಳಿದ್ರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಗುಡುಗಿದರು. ತುಮಕೂರು ಸಂಸದ ವಿ.ಸೋಮಣ್ಣ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ, ಈ ಸರ್ಕಾರ ಇನ್ನು 6ತಿಂಗಳು ನಡೆಯುತ್ತೊ ಇಲ್ವೊ ಗೊತ್ತಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ರು.
ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ್ ಕಾರಜೋಳ, ಕೋರ್ ಕಮಿಟಿ ಸದಸ್ಯರು, ನೂತನ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನ್ ಪರಿಷತ್ ಹಾಲಿ ಹಾಗೂ ಮಾಜಿ ಸದಸ್ಯರು, ರಾಜ್ಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
BJP-JDS : ಅರಮನೆ ಮೈದಾನದಲ್ಲಿ ದೋಸ್ತಿ ದರ್ಬಾರ್..!
- Advertisement -
- Advertisement -