ಕೊನೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆ ಮೂಲಕ ಕ್ರಿಕೆಟ್ ಪ್ರಿಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಹೇಶ್ವರ್ ರಾವ್ ನೇತೃತ್ವದ ತಜ್ಱರ ಸಮಿತಿ ಶಿಫಾರಸು, ಸಲಹೆ ಸೂಚನೆಗಳ ಅನ್ವಯ ಕ್ರಿಕೆಟ್ ಪಂದ್ಯಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಹಾಗಾದ್ರೆ, ಭವಿಷ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಗಮವಾಗಿ ಕ್ರಿಕೆಟ್ ಪಂದ್ಯ ಆಡಲು ಪಾಲಿಸಬೇಕಾದ ಕಠಿಣ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೂಡ ತಿಳಿಸಿದೆ.
ಕಳೆದ ವರ್ಷ ಜೂನ್ ತಿಂಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಗಿತವಾಗಿದ್ದ ಕ್ರಿಕೆಟ್ ಮುಂಬರುವ IPL ಉದ್ಘಾಟನಾ ಪಂದ್ಯದ ಮೂಲಕ ಶುಭಾರಂಭವಾಗಲಿದೆ. ಕುನ್ಹಾ ವಿಚಾರಣಾ ಆಯೋಗದ ವರದಿ ಆಧರಿಸಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಎಂದು ಮೂರು ಭಾಗ ಮಾಡಲಾಗಿದೆ. ಮೊದಲ ಹಂತದಲ್ಲಿ ಕಿರು ಅವಧಿಯ ಕ್ರಮ ಕೈಗೊಳ್ಳಬೇಕಿತ್ತು.
ಅದನ್ನು ಪರಿಶೀಲಿಸಲು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಸಮಿತಿ ಈಗಾಗಲೇ ಎರಡು ಬಾರಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೆಲ ಶಿಫಾರಸಿನೊಂದಿಗೆ ವರದಿ ನೀಡಿದೆ. ಆ ವರದಿ ಅನ್ವಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಅನುಮತಿಸಲಾಗಿದೆ.
ಅಂಬ್ಯುಲೆನ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಅಡೆತಡೆಯಿಲ್ಲದ ಚಲನೆಯನ್ನು ಖಾತ್ರಿಪಡಿಸಲು KSCAಗೆ ಸಲಹೆ ನೀಡಿದೆ. ಪ್ರೇಕ್ಷಕರು ಪಾದಚಾರಿ ಮಾರ್ಗಗಳಲ್ಲಿ ನಿಲ್ಲುವುದನ್ನು ತಪ್ಪಿಸಬೇಕು. ಕ್ರೀಡಾಂಗಣದ ಮೂರೂ ಬದಿಗಳಲ್ಲಿ ಸಾಧ್ಯವಾದಷ್ಟು ಪ್ರತ್ಯೇಕ ಹೋಲ್ಡಿಂಗ್ ಏರಿಯಾಗಳನ್ನು ಗುರುತಿಸಬೇಕು. ಪ್ರವೇಶ ನಿಯಂತ್ರಣ ತಪಾಸಣೆಗಳನ್ನು ಮತ್ತು ಸ್ಟ್ಯಾಂಡ್ ವಿಭಜನಾ ತಪಾಸಣೆಗಳನ್ನ ಬೇರ್ಪಡಿಸಬೇಕು.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಮೂಲಕ ಬರುವ ಪ್ರೇಕ್ಷಕರಿಗಾಗಿ ಕೆಎಸ್‌ಸಿಎ ಬಿ ಗ್ರೌಂಡ್ ಹೊಲ್ಡಿಂಗ್ ಏರಿಯಾಕ್ಕೆ ಸ್ಕೈವಾಕ್ ಅಥವಾ ನೇರ ಪ್ರವೇಶವನ್ನು ನಿರ್ಮಿಸಲು ಪರಿಗಣಿಸಬೇಕು. ಇದು ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಯಲ್ಲಿನ ಜನದಟ್ಟಣೆಯನ್ನ ಗಣನೀಯವಾಗಿ ಕಡಿಮೆ ಮಾಡಲಿದೆ. ಗೇಟ್ ಸಂಖ್ಯೆ 10, 12 ಮತ್ತು 13ರ ಮೂಲಕ ಕ್ರೀಡಾಂಗಣವನ್ನು ಪ್ರವೇಶಿಸುವ ಆಟಗಾರರು ಮತ್ತು VVIPಗಳ ಸುರಕ್ಷಿತ ಸಂಚಾರವನ್ನ ಖಚಿತಪಡಿಸಿಕೊಳ್ಳಲು ಕ್ವೀನ್ಸ್ ರಸ್ತೆಯಿಂದ ಪ್ರೇಕ್ಷಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಹೀಗೆ ಹತ್ತು ಹಲವು ಸಲಹೆಗಳನ್ನ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.
ಮಹೇಶ್ವರ್ ರಾವ್ ನೇತೃತ್ವದ ತಜ್ಱರ ಸಮಿತಿ ತಪಾಸಣೆ ಬಳಿಕ ಪೊಲೀಸ್ ಅಧಿಕಾರಿಗಳು, ಲೋಕೋಪಯೋಗಿ ಅಧಿಕಾರಿಗಳು, KSCA ಅಧಿಕಾರಿಗಳು, ವಾಸ್ತುಶಿಲ್ಪಿಗಳು ಜಂಟಿಯಾಗಿ ಚನ್ನಸ್ವಾಮಿ ಸ್ಟೇಡಿಯಂ ತಪಾಸಣೆ ಮಾಡಿ ಹಲವು ಸಲಹೆ ಸೂಚನೆಗಳನ್ನು ನೀಡಿದೆ. ಜಂಟಿ ತಪಾಸಣಾ ವರದಿ ಪ್ರಮುಖವಾಗಿ ಜನದಟ್ಟಣೆ ನಿರ್ವಹಣೆ, ಜನರ ಹರಿವು ಮತ್ತು ಸ್ಟೇಡಿಯಂನ ಸಿವಿಲ್ ರಚನೆಯಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಸಲಹೆ, ಸೂಚನೆ, ಶಿಫಾರಸುಗಳನ್ನು ನೀಡಿದೆ.
ವರದಿ : ಲಾವಣ್ಯ ಅನಿಗೋಳ




