ಮುಂಬೈ: ಮುಂಬೈನಲ್ಲಿ ಸರ್ಕಾರಿ ಸ್ವಾಮ್ಯದ ಎಂಟಿಎನ್ ಎಲ್ ಕಟ್ಟಡದಲ್ಲಿ ಬೆಂಕಿ ಹೊತ್ತುಕೊಂಡಿದೆ. ಪರಿಣಾಮ ಕಟ್ಟಡದೊಳಗಿದ್ದ 100ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ.
ಬಾಂದ್ರಾದ ಎಸ್.ವಿ ರೋಡ್ ನಲ್ಲಿರುವ ಸರ್ಕಾರಿ ಸ್ವಾಮ್ಯದ ಎಂಟಿಎನ್ ಎಲ್ ಬಿಲ್ಡಿಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 9 ಅಂತಸ್ಥಿನ ಕಟ್ಟಡದ ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಾಲ್ಕನೇ ಮಹಡಿಗೂ ವ್ಯಾಪಿಸಿದೆ. ಇನ್ನು ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕಟ್ಟಡದಲ್ಲಿದ್ದ ಸಿಬ್ಬಂದಿ ಟೆರೇಸ್ ಗೆ ತೆರಳಿಸಿ ಬೆಂಕಿಯ ಕೆನ್ನಾಲಿಗೆಯಿಂದ ಬಜಾವಾಗಿದ್ದಾರೆ. ಅಲ್ಲದೆ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸುವ ಭೀತಿ ಎದುರಾಗಿದ್ದು ರಕ್ಷಣೆಗಾಗಿ ಅಂಗಾಲಾಚುತ್ತಿದ್ದಾರೆ. ಇನ್ನು ಸುದ್ದಿತಿಳಿದ ಕೂಡಲೆ ಸ್ಥಳಕ್ಕೆ 14 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಇಂದು ಮಧ್ಯಾಹ್ನ 3.15ರ ವೇಳೆಗೆ ಕಾಣಿಸಿಕೊಂಡ ಬೆಂಕಿ ಇದೀಗ 2 ಮಹಡಿಗೆ ವ್ಯಾಪಿಸಿದೆ. ಇನ್ನು ಘಟನೆಯಲ್ಲಿ ಸದಕ್ಕೆ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಬೆಂಕಿ ಅವಘಡಕ್ಕೆ ಕಾರಣವೂ ತಿಳಿದುಬಂದಿಲ್ಲ.