Wednesday, October 22, 2025

Latest Posts

ಕೆರೆಗಳಲ್ಲಿ ಮೀನು ಸಾವು, ಬೆಳೆ ನಾಶ – ಕೈಗಾರಿಕಾ ತ್ಯಾಜ್ಯದ ವಿರುದ್ಧ ಆಕ್ರೋಶ!

- Advertisement -

ಶಿರಾ ವಸಂತ ನರಸಾಪುರ ಕೈಗಾರಿಕೆಯಿಂದ ಬರುವ ರಾಸಾಯನಿಕ ತ್ಯಾಜ್ಯ ಮಿಶ್ರಿತ ನೀರು, ಶಿರಾ ತಾಲೂಕಿನ ಹುಂಜಿನಾಳ ಕೆರೆ ಮಾರ್ಗವಾಗಿ ಕಳ್ಳಂಬೆಳ್ಳ, ಶಿರಾ ದೊಡ್ಡಕೆರೆ ಹಾಗೂ ಮದಲೂರು ಕೆರೆಗೆ ಹರಿಯುತ್ತಿದೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗಾರಿಕೆ ಮಾಲೀಕರ ಮೇಲೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ.

ಈ ಕೈಗಾರಿಕೆಯ ತ್ಯಾಜ್ಯ ಮಿಶ್ರಿತ ನೀರಿನಿಂದ ನೆಲಹಾಳ ಸಮೀಪದ ಕೆರೆಕಟ್ಟೆಗಳಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ರೈತರ ದನಕರುಗಳು ಕೂಡ ರೋಗದಿಂದ ನರಳಾಡುವಂಥಾಗಿದೆ. ರೈತರು ಬೆಳೆದ ಕೆಲ ಬೆಳೆಗಳು ಸಹ ನಾಶವಾಗಿತ್ತಿವೆ. ಶಿರಾ ತಾಲೂಕಿನ ಕೆರೆಗಳಿಗೆ ತ್ಯಾಜ್ಯದ ನೀರು ಹರಿಯುವುದನ್ನು ತಡೆಯದೆ ಹೋದ್ರೆ ರೈತರಿಗೆ ತೀರ್ವ ಸಂಕಷ್ಟ ಎದುರಾಗಲಿದೆ. ತಕ್ಷಣ ಜಿಲ್ಲಾಡಳಿತ ಈ ಕೈಗಾರಿಕೆಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಶಿರಾ ನಗರದಲ್ಲಿ ಕಳ್ಳಂಬೆಳ್ಳ ವ್ಯಾಪ್ತಿಯ ಮುಖಂಡರೊಂದಿಗೆ ಕೈಗಾರಿಕಾ ತ್ಯಾಜ್ಯ ಕುರಿತು ಮಂಗಳವಾರ ಚರ್ಚಿಸಿ ಮಾತನಾಡಿದ್ದಾರೆ. ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡ ಕೆರೆ ನೀರು ಲಕ್ಷಾಂತರ ಜನರ ಜೀವನಾಡಿಯಾಗಿದ್ದು ಶಿರಾ ನಗರದಲ್ಲಿ ಕುಡಿಯಲು ಬಳಸುತ್ತಾರೆ. ವಸಂತ ನರಸಾಪುರ ಕೈಗಾರಿಕೆಗಳಿಂದ ಬರುವಂತ ತ್ಯಾಜ್ಯದ ನೀರನ್ನು ನಮ್ಮ ತಾಲೂಕಿಗೆ ಪ್ರವೇಶ ಮಾಡದಂತೆ ತಡೆಯುವ ಹೊಣೆಗಾರಿಕೆ ತಾಲೂಕು ಆಡಳಿತದ್ದಾಗಿದೆ. ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ. ಜಯಚಂದ್ರ ಅವರು ತಕ್ಷಣ ಗಮನಹರಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜೆಡಿಎಸ್ ಮುಖಂಡ ಹುಂಜಿನಾಳ ರಾಜಣ್ಣ ಮಾತನಾಡಿ ವಸಂತ ನರಸಾಪುರದ ಕೈಗಾರಿಕಾ ತ್ಯಾಜ್ಯ ನೇರವಾಗಿ ನಮ್ಮ ಹುಂಜಿನಾಳ ಕೆರೆಗೆ ಬರುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರೈತರ ದನಕರುಗಳಿಗೆ ಈ ನೀರು ಮಾರಕವಾಗಿದೆ. ಮೀನುಗಳ ಮಾರಣ ಹೋಮದ ಜೊತೆಗೆ ದನಕರುಗಳಿಗೂ ರೋಗದ ಸಂಕಷ್ಟ ತಂದಿದೆ. ಇದಲ್ಲದೆ ಹುಂಜಿನಾಳ ಕೆರೆಯಿಂದ ನೀರು ಕಳ್ಳಂಬೆಳ್ಳ ಕೆರೆಯತ್ತ ಹರಿಯುತ್ತಿರುವುದರಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss