Karkala News : ಸಾಮಾನ್ಯವಾಗಿ ತ್ಯಾಜ್ಯ ನಿರ್ವಹಣಾ ಘಟಕಗಳ ಸುತ್ತ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ತ್ಯಾಜ್ಯದ ರಾಶಿಗಳು ಕಂಗೊಳಿಸುವುದು ಸಾಮಾನ್ಯ. ಅಲ್ಲದೆ ಕೆಲವೊಂದು ಘಟಕಗಳು ಗೆಬ್ಬೆದ್ದು ನಾರುವ ಪರಿಸ್ಥಿತಿಯೂ ಇದೆ ಆದರೆ ಕಾರ್ಕಳದ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ಹೂವು ಗಿಡಗಳು ಕಂಗೊಳಿಸುತ್ತಿದ್ದು ಸುಂದರ ಉದ್ಯಾನವನದಂತಾಗಿ ಮಾರ್ಪಟ್ಟಿದೆ.
ಕಾರ್ಕಳ ಪುರಸಭೆಯ ಕರಿಯಕಲ್ಲು ಪ್ರದೇಶದಲ್ಲಿ ಕಾರ್ಯಚರಿಸುವ ಘನ ತ್ಯಾಜ್ಯ ನಿರ್ವಹಣಾ ಘಟಕ ತ್ಯಾಜ್ಯ ನಿರ್ವಹಣೆಯ ಜೊತೆಯಲ್ಲಿ ಉದ್ಯಾನವನವಾಗಿ ಬೆಳೆಯುತ್ತಿರುವುದರಿಂದ ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದೆ. ಸುತ್ತಲೂ ಸುಂದರ ಹೂದೋಟದ ನಿರ್ಮಾಣದಿಂದ ಪರಿಸರವನ್ನು ನೋಡುವುದಕ್ಕೆ ಖುಷಿಯಾಗುತ್ತದೆ.
ಹಿಂದಿನ ಆಡಳಿತದ ಸರ್ಕಾರದ ಅವಧಿಯಲ್ಲಿ ಕಾರ್ಕಳದಲ್ಲಿ ಎಎಸ್‍ಎಸ್‍ಎಂ ನ್ನು ಮೊದಲ ಬಾರಿಗೆ ಕಾರ್ಕಳಕ್ಕೆ ಪರಿಚಯಿಸಲಾಗಿತ್ತು. ಸುಮಾರು 2 ಕೋ.ರೂ. ವೆಚ್ಚದ ಯೋಜನೆಗೆ 2022ರ ಜೂನ್ ತಿಂಗಳಲ್ಲಿ ಕರಿಯಕಲ್ಲು ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಭೂಮಿ ಪೂಜೆ ನಡೆದು ಚಾಲನೆ ನೀಡಲಾಗಿತ್ತು. ಇದೇ ವೇಳೆ ಅಲ್ಲಿನ ತ್ಯಾಜ್ಯ ಮಲೀನ ನೀರಿನಿಂದ ಸುಂದರ ಹೂದೋಟ ನಿರ್ಮಾಣ ಕಾರ್ಯವನ್ನು ಮಾಡಲಾಗಿತ್ತು, ಸಂಸ್ಕರಣಾ ಘಟಕದ ಮರುಪೂರಣ ನೀರನ್ನು ಸದ್ಬಳಕೆ ಮಾಡಿಕೊಂಡು ತ್ಯಾಜ್ಯ ನಿರ್ವಹಣಾ ಘಟದಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಇದೀಗ ಬೆಳೆಸಿದ ಹೂವಿನ ಗಿಡಗಳು ಬೆಳೆದು ನಿಂತು ಸುಂದರವಾಗಿ ಹೂವು ಬಿಟ್ಟು ನೋಡುವುದಕ್ಕೆ ವಿಶೇಷ ಆಕರ್ಷಣಿಯವಾಗಿದೆ. ಜೊತೆಗೆ ಪ್ರಕೃತಿ ಪ್ರಿಯರನ್ನು ಕೂಡ ಕೈಬೀಸಿ ಕರೆಯುವಂತಿದೆ.
ಸ್ವಚ್ಚತೆಯ ಜೊತೆಗೆ ಹೂದೋಟ : ತ್ಯಾಜ್ಯದ ನಿರ್ವಹಣೆಯ ಜೊತೆಯಲ್ಲಿ ಘಟಕದಲ್ಲಿ ಸುಂದರ ಹೂವುದೋಟದ ನಿರ್ಮಾಣವಾಗಿದ್ದು ಘಟಕ ಪರಿಸರ ಸ್ನೇಹಿಯಾಗಿ ರೂಪ ತಳೆದುಕೊಂಡಿದೆ. ತ್ಯಾಜ್ಯ ತುಂಬಿ ದುರ್ನಾತ ಬೀರುವ ಘಟಕಗಳ ಮಧ್ಯೆ ಕಾರ್ಕಳದ ಈ ತ್ಯಾಜ್ಯ ನಿರ್ವಹಣಾ ಘಟಕ ಮಾತ್ರ ದುರ್ವಾಸನೆ ಸಮಸ್ಯೆ ಮುಕ್ತಿ ನೀಡಿ ಸುಂದರ ಪರಿಸರದವಗಿ ಕಣ್ಮನ ಸೆಳೆಯುತ್ತಿದೆ.
ತ್ಯಾಜ್ಯ ನಿರ್ವಹಣಾ ಘಟಕವೆಂದರೆ ಸಾಕು ಮುಗುಮುಚ್ಚಿಕೊಂಡೆ ಸಗಬೇಕಾದ ಪರಿಸ್ಥಿತಿ ಎಲ್ಲೆಡೆ ಇದೆ ಆದರೆ ಕಾರ್ಕಳದ ಕರಿಯಕಲ್ಲಿನ ಈ ಘಟಕಕ್ಕೆ ಬಂದರೆ ಒಂದು ಕ್ಷಣ ಗಿಡ ನಡುವೆ ನಿಂತು ಒಂದು ಸುಂದರ ಫೆÇೀಟೊ ಕ್ಲಿಕ್ಕಿಸೋಣ ಎನ್ನುವ ಮನಸ್ಸುಮೂಡುವುದು ಮಾತ್ರ ನಿಜಾ. ತ್ಯಾಜ್ಯದಿಂದ ಪರಿಸರ ಮಲೀನಗೊಂಡು ರೋಗರುಜಿನಗಳು ಹರಡುವುದು ನಿಂತಿದೆ. ಪರಿಸರ ಮಲೀನ ತಡೆಗೂ ಇದು ಒಂದು ರೀತಿಯಲ್ಲಿ ಕಾರಣವಾಗಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಗ್ರಾಮೀಣ ಭಾಗದ ಪೌರಾಡಳಿತ ಪ್ರದೇಶಕ್ಕೆ ಯೋಜನೆಯನ್ನು ತರುವಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಯಶಸ್ವಿಯಾಗಿದ್ದರು, ಹಾಗೂ ಪುರಸಭೆ ಅಧ್ಯಕ್ಷೆಯಾಗಿದ್ದ ಸುಮಾ ಕೇಶವ್ ಅವಧಿಯಲ್ಲಿ ಯೋಜನೆ ಕಾರ್ಯಗತಗೊಂಡಿದ್ದು, ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ಸಹಿತ ಆಡಳಿತ-ವಿಪಕ್ಷ ಸದಸ್ಯರ ಸಹಕಾರದಿಂದ ಉತ್ತಮವಾಗಿ ಯೋಜನೆ ಇಲ್ಲಿ ಕಾರ್ಯಗತಗೊಂಡಿದೆ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಮಾರಾಟವನ್ನು ಕೂಡ ಮಾಡಲಾಗುತ್ತಿದೆ.
ವಾಸನೆ ರಹಿತ ಪರಿಸರ ಸ್ನೇಹಿ ಘಟಕವಾಗಿ ಕೊಳಚೆ ಮುಕ್ತವಾಗಿ ಸುಂದರ ವಾತಾವರಣ ಸೃಷ್ಟಿಗೊಂಡಿದೆ. ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲಾಗಿದ್ದು, ಘಟಕದಲ್ಲಿ ಹೂ ತೋಟದಂತೆ ಸುಂದರ ಉದ್ಯಾನವನ ನಿರ್ಮಿಸಲಾಗಿದೆ. ಗಿಡಗಳು ಹೂವು ಬಿಟ್ಟು ಇಡೀ ಪರಿಸರ ಸುಂದರವಾಗಿ ಕಾಣುತ್ತಿದೆ.