ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ, ರೈತರು ಮಾಡಿದ್ದ ಹೋರಾಟದಲ್ಲಿ ರೈತ ಮುಖಂಡ ಮಾರುತಿ ಮಾನ್ಪಡೆ ಕೂಡ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ತಗುಲಿ, ಅವರು ಸಾವನ್ನಪ್ಪಿದ್ದರು. ಈ ಬಗ್ಗೆ ಡಿ.ವಿ.ಸದಾನಂದ ಗೌಡರು, ಈ ಸಾವಿಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾರಣರೆಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕೊರೊನಾದಿಂದ ದೇಶದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಹೊಣೆ ಯಾರು ಎಂದು ಕೇಳಿದ್ದಾರೆ.
ಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎಂಬ ಬಾಲಿಷ ಹೇಳಿಕೆಯನ್ನು ಡಿ.ವಿ.ಸದಾನಂದ ಗೌಡ ನೀಡಿದ್ದಾರೆ. ಹಾಗಿದ್ದರೆ ದೇಶದಲ್ಲಿ ಒಂದು ಕಾಲು ಲಕ್ಷ ಜನ ಕೊರೊನಾಕ್ಕೆ ಬಲಿಯಾಗಿದ್ದಾರಲ್ಲಾ ಅದಕ್ಕೆ ಯಾರು ಹೊಣೆ ಎಂದು ಹೇಳುವಿರಾ ಸದಾನಂದ ಗೌಡರೇ?
ಕೊರೊನಾ ವಿರುದ್ಧ ಹೋರಾಡಬೇಕಾಗಿದ್ದ ಕೇಂದ್ರ ಸರ್ಕಾರ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜನವಿರೋಧಿ ಕಾನೂನುಗಳನ್ನು ಜಾರಿಗೆ ತಂದದ್ದೇ ಮಾನ್ಪಡೆಯವರೂ ಸೇರಿದಂತೆ ಅನೇಕ ಹೋರಾಟಗಾರರ ಸಾವಿಗೆ ಕಾರಣ..
ಮುನಿರತ್ನ ತನಗೆ ಅನುದಾನ ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತೊರೆದದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಆರ್.ಆರ್ ನಗರ ಕ್ಷೇತ್ರಕ್ಕೆ ರೂ.2,000 ಕೋಟಿಗೂ ಅಧಿಕ ಅನುದಾನ ನೀಡಿದ್ದೆ, ಇಂದು ಕ್ಷೇತ್ರದಲ್ಲಿ ಏನಾದರೂ ಅಭಿವೃದ್ಧಿ ಕಾರ್ಯಗಳಾಗಿದ್ದರೆ ಅದಕ್ಕೆ ನಮ್ಮ ಸರ್ಕಾರ ಕಾರಣ.
ಕೆ.ಆರ್ ಪೇಟೆಯಲ್ಲಿ ಹಣ ಹಂಚಿ ಗೆದ್ದಂತೆ ಶಿರಾ ಮತ್ತು ಆರ್.ಆರ್ ನಗರದಲ್ಲೂ ಹಣ ಹಂಚಿ ಸುಲಭದಲ್ಲಿ ಗೆಲ್ಲಬಹುದು ಎಂಬುದು ಬಿಜೆಪಿಯವರ ಲೆಕ್ಕಾಚಾರ. ಆದರೆ ಇಲ್ಲಿನ ಜನ ಹಣದ ಆಮಿಷಕ್ಕೆ ಒಳಗಾಗದೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸವಿದೆ.
ಹೀಗೆ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ, ಸದಾನಂದ ಗೌಡ ವಿರುದ್ಧ ಕಿಡಿಕಾರಿದ್ದಾರೆ.