Sunday, April 27, 2025

Latest Posts

ಬಿ.ಎಲ್.ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ: ಸಾಲು ಸಾಲು ಆಕ್ರೋಶಭರಿತ ಟ್ವೀಟ್..

- Advertisement -

ಬಿ.ಎಲ್.ಸಂತೋಷ್ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಬಿ.ಎಲ್‌.ಸಂತೋಷ್ ಅವರು ‘ಹಿಂದುತ್ವ’ದ ಜಪ ನಿಲ್ಲಿಸಿ ‘ದಲಿತ’ ಜಪ ಶುರು ಮಾಡಿದ್ದಾರೆ. ‘ಹಿಂದು-ಒಂದು’ ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ,ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ?

ರಾಜ್ಯದಲ್ಲಿ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ, ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ? ಇದು ತಲೆತಗ್ಗಿಸುವಂತಹ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ ಬಿಎಲ್‌ಸಂತೋಷ್ ಅವರೇ?

ದಲಿತರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರನ್ನು ದೇಶ ಕಂಡಿದೆ. ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಗೋಮಾಂಸ ತಿಂದಿದ್ದಕ್ಕೆ, ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ, ದಲಿತರ ಬೆನ್ನತ್ತಿ ಹಿಂಸಿಸಿ, ಸಾಯಿಸಿದ್ದು ಯಾರ ಆಡಳಿತದಲ್ಲಿ ಬಿಎಲ್‌ ಸಂತೋಷ್‌ ಅವರೇ?

ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವವರು ಯಾವ ಪಕ್ಷದವರು ಬಿಎಲ್‌ಸಂತೋಷ್? ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ?

ನಿಮ್ಮ ಕಾಲದಲ್ಲಿ ದಲಿತರ ಹತ್ಯೆ/ದೌರ್ಜನ್ಯ ದುಪ್ಪಟ್ಟಾಗಿದೆ ಎಂದು NCRBHQ ವರದಿ ಹೇಳುತ್ತಿದೆ. ಹೀಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತೀರಿ. ಇದು ನಿಮ್ಮ ದಲಿತರ ಮೇಲಿನ ಕಾಳಜಿಯಲ್ಲವೇ ಬಿಎಲ್‌ಸಂತೋಷ್ ಅವರೇ?

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‌ಸಿ ಪಿ-ಟಿಎಸ್‌ಪಿ ಯೋಜನೆಗೆ ನೀಡಿದ್ದ ಹಣ ರೂ.22,161 ಕೋಟಿ ಮಾತ್ರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ನೀಡಿದ್ದ ಹಣ ರೂ.88, 395 ಕೋಟಿ. ನರೇಂದ್ರ ಮೋದಿ ಅವರಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರ್ತೀರಾ ಬಿಎಲ್‌ಸಂತೋಷ್ ಅವರೇ?

ದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು‌ ಬಿಎಲ್‌ಸಂತೋಷ್ ಅವರೇ?ದಲಿತರು ಜಾಗೃತರಾಗಿದ್ದಾರೆ, ಹಿತೈಷಿಗಳು ಯಾರು? ಹಿತಶತ್ರುಗಳು ಯಾರು ಎನ್ನುವುದು ಅವರಿಗೆ ಗೊತ್ತಿದೆ. ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡ್ಬೇಡಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

- Advertisement -

Latest Posts

Don't Miss