ಉಪಚುನಾವಣಾ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಸಿದ್ದರಾಮಯ್ಯನವರು ಬಿಜೆಪಿ ಅಭ್ಯರ್ಥಿ ಮುನಿರತ್ನಾ ವಿರುದ್ಧ ಹಿಗ್ಗಾಮುಗ್ಗಾ ಟ್ವೀಟಾಸ್ತ್ರ ಹರಿಬಿಟ್ಟಿದ್ದಾರೆ.
ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮುನಿರತ್ನ ಅವರು ಎರಡು ಬಾರಿ ಗೆದ್ದು ಶಾಸಕನಾಗಲು ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಅವರ ವೈಯಕ್ತಿಕ ವರ್ಚಸ್ಸಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್ ನಗರ ಕ್ಷೇತ್ರದ ಅಭಿವೃದ್ಧಿಗೆ ರೂ.2,000 ಕೋಟಿ ಅನುದಾನ ನೀಡಿದ್ದೆ, ಆದರೂ ನಮಗೆ ದ್ರೋಹ ಮಾಡಿದ್ರಲ ಮುನಿರತ್ನ ಅವರೇ, ಅಂಥಾ ಅನ್ಯಾಯ ನಾವೇನು ಮಾಡಿದ್ವಿ ನಿಮ್ಗೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ತನ್ನ ತಾಯಿ ಅಂತ ಹೇಳ್ತಿದ್ದ ಮುನಿರತ್ನ ಅದೇ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ರು. ನಾವು ಯಾಕಪ್ಪಾ ಪಕ್ಷನ ತಾಯಿ ಅಂತ ಕರೀತಿದ್ದಿ, ಈಗ ಅದೇ ತಾಯಿಗೆ ಮೋಸ ಮಾಡಿದ್ಯಲ ಅಂದ್ರೆ ಕಾಂಗ್ರೆಸ್ ನಾಯಕರು ನನ್ನ ತಾಯಿಗೆ ಅವಮಾನ ಮಾಡ್ತಿದಾರೆಂದು ಗೊಳೋ ಅಂತ ಮೊಸಳೆ ಕಣ್ಣೀರು ಸುರಿಸ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.