Mandya: ಮಂಡ್ಯ: ಜಲ ಜೀವನ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲಿಸಿದ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಕಾರ್ಯಪಾಲಕ ಅಭಿಯಂತರರಿಂದ ಮಾಹಿತಿ ಪಡೆದರು.
ಮಂಡ್ಯ ತಾಲೂಕಿನ ಹನಕೆರೆ, ಮದ್ದೂರು ತಾಲೂಕಿನ ಗುಡಿಗೆರೆ ಮತ್ತು ಯಲಾದಹಳ್ಳಿ ಹಾಗೂ ಮಳವಳ್ಳಿ ತಾಲೂಕಿನ ಕೆಂಬೂತಗೆರೆ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಅವರು, ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬಗಳಿಗೂ ನೀರು ಸರಬರಾಜು ಮಾಡಲು ಅವಶ್ಯಕವಿರುವ ಕಾಮಗಾರಿಗಳನ್ನು ಯೋಜನೆಯ ಮಾರ್ಗಸೂಚಿಯನುಸಾರ ತೆಗೆದುಕೊಂಡು ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಗ್ರಾಮ ಪಂಚಾಯತ್ ಗಳಿಗೆ ಹಸ್ತಾಂತರ ಮಾಡುವಂತೆ ಸೂಚಿಸಿದರು.
ಪೈಪ್ ಲೈನ್ ಅಳವಡಿಸಲು ಕತ್ತರಿಸಲಾಗಿರುವ ರಸ್ತೆ ಭಾಗವನ್ನು ಸರಿಯಾದ ರೀತಿಯಲ್ಲಿ ಮುಚ್ಚಿಲ್ಲದಿರುವುದರಿಂದ ಆನೇಕ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಈ ನಿಟ್ಟಿನಲ್ಲಿ ಅಭಿಯಂತರರುಗಳು ಕೂಡಲೇ ಕ್ರಮಗಳನ್ನು ತೆಗೆದುಕೊಂಡು ಪೈಪ್ ಲೈನ್ ಅಳವಡಿಸಲು ಕತ್ತರಿಸಿರುವ ಭಾಗವನ್ನು ಎಸ್ ಓ ಪಿ ಯಂತೆ ಮರುಪೂರಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಕುಡಿಯುವ ನೀರು ಸರಬರಾಜು ಯೋಜನೆಯಡಿ ಸೃಜಿಸಲಾಗಿರುವ ಸ್ವತ್ತುಗಳನ್ನು ಸಂರಕ್ಷಣೆ ಮಾಡಬೇಕು. ಕಾಲ ಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಫೀಲ್ಡ್ ಟೆಸ್ಟ್ ಕಿಟ್ ಮೂಲಕ ನೀರಿನ ಪರೀಕ್ಷೆಯನ್ನು ಕಾಲ ಕಾಲಕ್ಕೆ ಮಾಡುವ ಮೂಲಕ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಪ್ರಮೋದ್ ಕುಮಾರ್, ಮಂಡ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಣೇಶ್ ಹೆಗಡೆ, ಮದ್ದೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಧುಸೂಧನ್, ಮಳವಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.




