ಕಸ ಚಲ್ಲಿದ್ದಕ್ಕೆ ಸರ್ಕಾರಿ ನೌಕರರು ಗರಂ

www.karnatakatv.net :ಬೆಳಗಾವಿ:  ನಗರದಲ್ಲಿ ಇತ್ತಿಚೆಗೆ ಸರಕಾರಿ ಕಚೇರಿ ಮತ್ತು ಆಯುಕ್ತರ ನಿವಾಸದೆದುರು ಕಸ ಚೆಲ್ಲಿದ ಎರಡು ಪುಂಡಾಟ ಪ್ರಕರಣಗಳಿಗೆ ಸರಕಾರಿ ನೌಕರರು ಗರಂ ಆಗಿದ್ದಾರೆ. ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಮಾಡಿ, ಅನಾಗರಿಕರಂತೆ ಕಸ ಎಸೆದಿದ್ದ ಎರಡು ಪ್ರಕರಣಗಳಿಗೆ ಈಗ ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ವ್ಯಗ್ರರಾಗಿದ್ದಾರೆ.ಇತ್ತೀಚೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಜನರೊಂದಿಗೆ ಟ್ರ್ಯಾಕ್ಟರ್ ತುಂಬ  ಕಸ ತಂದು ಪಾಲಿಕೆ ಆಯುಕ್ತರ ಮನೆ ಎದುರು ಎಸೆದಿದ್ದರು. ಅದಾದ ಬಳಿಕ  ಸಮಾಜ ಸೇವಕನೆಂದು ಹೆಸರು ಹೇಳಿಕೊಂಡವನೊಬ್ಬ ಪೊಲೀಸರ ಎದುರೇ ಪಾಲಿಕೆ ಆಯುಕ್ತರ ಕಚೇರಿ ಎದುರು ಕಸ ಒಗೆದು ಪ್ರತಿಭಟನೆಯ ಹೆಸರಿನಲ್ಲಿ ಪುಂಡಾಟ ಮೆರೆದ ಪ್ರಕರಣ ನಗರದ ಜನತೆಗೆ ಅಸಹ್ಯ ಮೂಡಿಸಿ ಗಮನ ಸೆಳೆದಿತ್ತು. ಎರಡೂ ಪ್ರಕರಣಗಳ ಅಡಿ ಒಂದೇ ಪ್ರಕರಣದಲ್ಲಿ ಸಮಾಜ ಸೇವಕನ ಮೇಲೆ ಪ್ರಕರಣ ದಾಖಲಿಸಲಾಗುತ್ತಿದ್ದು, ಇನ್ನೊಂದು ಪ್ರಕರಣದಲ್ಲಿ ಕೇಸ್ ಆಗಿಲ್ಲ ಎಂಬುವುದು ಸಮಾಜ ಸೇವಕನ ಸಿಟ್ಟಿಗೂ ಕಾರಣವಾಗಿದೆ ಎಂದು ಮೂಲ ತಿಳಿಸಿದೆ.

ಸರಕಾರಿ ಕಚೇರಿಗಳು ಮತ್ತು ನಿವಾಸಗಳಿಗೆ ಈಗ ಬೆದರಿಕೆ ಹಾಕುವ ತಂತ್ರ ನಡೆಯುತ್ತಿರುವ ಬಗ್ಗೆ ನೌಕರರು ಆತಂಕಿತರಾಗಿದ್ದು, ಸೂಕ್ತ ಭದ್ರತೆ ಮತ್ತು ಸೇವಾ ಪರಿಸರ ಒದಗಿಸಿ ಕೊಡುವಂತೆ ಜಿಲ್ಲಾಧಿಕಾರಿ ಮೂಲಕ ಸರಕಾರದ ಗಮನ ಸೆಳೆಯಲಾಯಿತು.ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ಹಾಗೂ ಸಮಸ್ತ ಪಾಲಿಕೆ ಅಅದಿಕಾರಿ ಮತ್ತು ಸಿಬ್ಬಂಧಿ ಜಿಲ್ಲಾಧಿಕಾರಿ ಮತ್ತು ಪಾಲಿಕೆಯ ಆಡಳಿತಾಧಿಕಾರಿ ಎಂ. ಜಿ. ಹಿರೇಮಠ ಅವರಿಗೆ ಮನವಿ ಮೂಲಕ ದೂರು ಸಲ್ಲಿಸಿದ್ದಾರೆ.

ಎರಡೂ ಪ್ರಕರಣಗಳು ಗಮನಕ್ಕೆ ಬಂದಿದ್ದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸದರಿ ಘಟನೆಯಿಂದ ಮಹಾನಗರ ಪಾಲಿಕೆ ಆಯುಕ್ತ ಕೆ. ಎಚ್. ಜಗದೀಶ ಅಸಹ್ಯ ವ್ಯಕ್ತಪಡಿಸಿದ್ದು, ಇಂತಹ ಜಟಿಲ ವ್ಯವಸ್ಥೆಯಲ್ಲಿ ನನಗೆ ಇಲ್ಲಿ ಕೆಲಸವೆ ಬೇಡ ಎಂಬ ನಿರ್ಧಾರ ತಳೆದು ಸ್ವಯಂಪ್ರೇರಿತ ವರ್ಗಾವಣೆ ಮಾಡಿಸಿಕೊಳ್ಳುವ ಸಂಬಂಧ ಸರಕಾರದ ಕದ ತಟ್ಟಿದ್ದಾರೆ.

About The Author