ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಪುತ್ರ ಕಿರೀಟಿ ರೆಡ್ಡಿ ನಾಯಕ ನಟರಾಗಿ ಅಭಿನಯಿಸಿರುವ “ಜೂನಿಯರ್” ಸಿನಿಮಾ ಇದೀಗ ದೇಶದಾದ್ಯಂತ ವೈರಲ್ ಆಗಿದೆ. ಈ ನಡುವೆ ಕಿರೀಟಿ ರೆಡ್ಡಿ ಅವರ ಹುಟ್ಟೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಚ್ಚರಿ ಮೂಡಿಸಿದ್ದಾಳೆ. ಹೌದು ‘ವೈರಲ್ ವಯ್ಯಾರಿ’ ಹಾಡಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ.
ಜೂನಿಯರ್ ಸಿನಿಮಾ ಕನ್ನಡ ಹಾಗೂ ತೆಲುಗು ದ್ವಿಭಾಷೆಯಲ್ಲಿ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಪಡೆಯುತ್ತಿದೆ. ಹೀರೋ ಆಗಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಕಿರೀಟಿ, ತಮ್ಮ ನಟನೆ, ನೃತ್ಯ ಹಾಗೂ ಸ್ಟಂಟ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.
ಈ ಸಿನಿಮಾದಲ್ಲಿರುವ ಒಂದು ಎಲ್ಲರ ಫೇವರಿಟ್ ಹಾಡು ಅಂದ್ರೆ ಅದು ‘ವೈರಲ್ ವಯ್ಯಾರಿ’. ಈ ಹಾಡಿನ ಸ್ಟೆಪ್‌ಗಳು ಇಂಟರ್ನೆಟ್‌ನಲ್ಲಿ ಹವಾ ಹುಟ್ಟುಹಾಕಿವೆ. ನಟ ಕಿರೀಟಿಯು ಈ ಹಾಡಿಗೆ ನೃತ್ಯ ಮಾಡಲು ಏನಿಲ್ಲಾ ಅಂದ್ರು ಹತ್ತು ದಿನಗಳ ಅಭ್ಯಾಸ ಮಾಡಿದ್ದಾರೆ. ಪ್ರತಿ ಸ್ಟೆಪ್ ಕಷ್ಟದ್ದೇ ಆಗಿತ್ತು. ತನ್ನ ಮೊದಲ ಚಿತ್ರದಲ್ಲಿಯೇ ಹೆಚ್ಚು ಶ್ರಮ ಪಟ್ಟಿದ್ದಾರೆ. ಈ ಮದ್ಯೆ ಸರ್ಕಾರಿ ಶಾಲೆಯ ವಿದ್ಯಾರ್ಥಿ ಇದೆ ತರಹ ಡಾನ್ಸ್ ಮಾಡಿ ಎಲ್ಲರ ಮನ ಗೆದ್ದಿದ್ದಾಳೆ.
ಹೌದು, ವಿ. ಪೂಜಾ – ಬಳ್ಳಾರಿ ಜಿಲ್ಲೆ, ಕುರುಗೋಡು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ. ಇವಳು ಅಭ್ಯಾಸವಿಲ್ಲದೆ, ಕೇವಲ ಒಂದೇ ರಾತ್ರಿಯಲ್ಲಿ ವೈರಲ್ ವಯ್ಯಾರಿ ಹಾಡಿನ ಡ್ಯಾನ್ಸ್ ಸ್ಟೆಪ್‌ಗಳನ್ನು ಕಲಿತು, ಅದ್ಭುತವಾಗಿ ನೃತ್ಯ ಮಾಡಿ ಅದನ್ನು ವಿಡಿಯೋ ರೂಪದಲ್ಲಿ ಅಪ್ಲೋಡ್ ಮಾಡಿದ್ದಾಳೆ. ಅವಳ ನೃತ್ಯದಲ್ಲಿ ತೋರಿದ ನಿಖರತೆ, ಎನರ್ಜಿ ಇಡೀ ಸೋಶಿಯಲ್ ಮೀಡಿಯಾ ಅಷ್ಟೇಅಲ್ಲದೆ, ನಟ ಕಿರೀಟಿಯ ಗಮನ ಸೆಳೆದಿದೆ.
‘ನಾನು ಹತ್ತು ದಿನ ಅಭ್ಯಾಸ ಮಾಡಿದ ಡ್ಯಾನ್ಸ್‌ನ್ನು, ಈ ಬಾಲಕಿ ಒಂದೇ ರಾತ್ರಿಯಲ್ಲಿ ಕಲಿತು ನೃತ್ಯ ಮಾಡಿದ್ದಾಳೆ. ಪೂಜಾ ಬಹಳ ಪ್ರತಿಭಾವಂತ ವಿದ್ಯಾರ್ಥಿನಿ’ ಅಂತ ಹೊಗಳಿದ್ದಾರೆ. ಇದರ ಬೆನ್ನಲ್ಲೇ ಕಿರೀಟಿ, ಪೂಜಾ ಮತ್ತು ಅವರ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿ ಗೌರವಿಸಿದ್ದಾರೆ. ಅವರಿಗೆ ಉಡುಗೊರೆ ನೀಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ಕ್ಷಣಗಳ ಫೋಟೋಗಳು ವೈರಲ್ ಆಗಿವೆ.
ಇನ್ನೂ ‘ಜೂನಿಯರ್’ ಚಿತ್ರವು ಭರ್ಜರಿ ಯಶಸ್ಸು ಕಂಡಿದ್ದು, ಬೆಂಗಳೂರು, ಹೈದರಾಬಾದ್ ಮತ್ತು ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ವರದಿ : ಲಾವಣ್ಯ ಅನಿಗೋಳ