ಬೆಂಗಳೂರು : ರಾಜ್ಯದ ಬಹು ನಿರೀಕ್ಷಿತ ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕಯ ವಿರುದ್ಧ ರಾಜ್ಯದ ನಾಯಕರು ಸಿಡಿದೆದ್ದಿದ್ದಾರೆ. ಮಹದಾಯಿಗೆ ಅನುಮತಿ ನೀಡಲ್ಲ ಎನ್ನುವುದಕ್ಕೆ ಅವರ್ಯಾರು ಎಂದು ಆಕ್ರೋಶ ಹೊರಹಾಕಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಸಚಿವರು ಹಾಗೂ ಶಾಸಕರು ಗೋವಾ ಸಿಎಂ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ.
ಗೋವಾ ಸಿಎಂ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಫೆಡರಲ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಈಗಾಗಲೇ ಮಹದಾಯಿ ಯೋಜನೆ ಬಗ್ಗೆ ಅವಾರ್ಡ್ ನಿರ್ಧಾರ ಆಗಿ, ಟೆಂಡರ್ ಕೂಡ ಕರೆಯಲಾಗಿದೆ. ಈಗ ಕೆಲಸ ಶುರು ಮಾಡಬೇಕು. ಇದರ ಮಧ್ಯೆ ಅರಣ್ಯ ಇಲಾಖೆ ಏನೋ ನೊಟೀಸ್ ಕೊಟ್ಟಿದೆ. ನಾವು ಅದಕ್ಕೆ ಎಲ್ಲಾ ಉತ್ತರ ಕೊಡುತ್ತೇವೆ. ಮಹದಾಯಿ ವಿಷಯದಲ್ಲಿ ನಮ್ಮ ಕೆಲಸ ನಾವು ಪ್ರಾರಂಭ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಮಹದಾಯಿ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ತಾಳುತ್ತಿದೆ. ಗೋವಾ ಸಿಎಂ ಹೇಳಿಕೆ ಆಕ್ರೋಶ ಹೆಚ್ಚಿಸಿದೆ. ಮಹದಾಯಿಗೆ ಕೇಂದ್ರ ಅನುಮತಿ ಕೊಡುತ್ತಿಲ್ಲ. ಕೇಂದ್ರ ವಿಳಂಬ ಧೋರಣೆಯನ್ನ ಅನುಸರಿಸುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ಬಲಹೀನಗೊಳಿಸುವ ಧೋರಣೆ ಇದಾಗಿದೆ ಎಂದು ಕಾನೂನ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಕಿಡಿಕಾರಿದ್ದಾರೆ.
ಇದನ್ನೂ ಓದಿ : ನಟ ದರ್ಶನ್‌ಗೂ ಪವಿತ್ರಾ ಗೌಡಗೂ ಏನು ಸಂಬಂಧ?
ಈ ಕೇಂದ್ರ ಸರ್ಕಾರದಿಂದ ಮಹದಾಯಿಗೆ ವಿರೋಧವಿದೆ. ನಮಗೆ ನೀರು ಹಂಚಿಕೆಯಾಗಿದೆ. ಅದಕ್ಕೆ ಕೇಂದ್ರ ಅನುಮತಿ ಕೊಡುತ್ತಿಲ್ಲ. ಗೋವಾ ಸರ್ಕಾರ ಕೂಡ ಸಹಕರಿಸುತ್ತಿಲ್ಲ. ನಮ್ಮ ಸಂಸದರು ಯಾರು ಬಾಯಿ ಬಿಡ್ತಿಲ್ಲ. ರಾಜ್ಯದ ಜನ ಇವರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಕೆಲಸಕ್ಕೆ ಬಾರದನ್ನೆಲ್ಲ ಇವರು ಮಾತನಾಡ್ತಾರೆ. ರಾಜ್ಯದ ಬಗ್ಗೆ ಅವರು ಮಾತನಾಡಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬಿಜೆಪಿ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು. ಕೇಂದ್ರ ಸರ್ಕಾರವಂತೂ ನಮಗೆ ಸಹಕರಿಸುತ್ತಿಲ್ಲ. ಚುನಾವಣೆ ವೇಳೆ ಭರವಸೆ ಕೊಡ್ತಾರೆ. ಆದರೆ ಮುಗಿದ ಮೇಲೆ ಅವರು ಮರೆತೇ ಬಿಡ್ತಾರೆ ಎಂದು ರಾಮಲಿಂಗಾರೆಡ್ಡಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮಹದಾಯಿ ನಮ್ಮ ರಾಜ್ಯದ ಹಕ್ಕು. ಕೇಂದ್ರ ಅನುಮತಿ ಕೊಡಲ್ಲ ಅನ್ನೋಕೆ ಗೋವಾ ಸಿಎಂ ಯಾರು? ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಪ್ರಶ್ನಿಸಿದ್ದಾರೆ. ನಾವು ಹಾಲು, ಕಾಯಿಪಲ್ಯ ನಿಲ್ಲಿಸಿದ್ರೆ ಗೋವಾಗೆ ಏನು ಸಿಗೋದಿಲ್ಲ, ನೆನಪಿರಲಿ. ಗೋವಾದವರು ಏನೇ ಮಾಡಿದ್ರು ಮಹದಾಯಿ ತಡೆಯೋಕೆ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸರ್ವಪಕ್ಷಗಳ ಸಭೆ ಕರೆಯುವಂತೆ ಮನವಿ ಮಾಡುತ್ತೇನೆ. ಅಲ್ಲದೆ ಎಲ್ಲ ಪಕ್ಷಗಳ ನಿಯೋಗದ ಜೊತೆ ಪ್ರಧಾನಿಗಳನ್ನು ಭೇಟಿ ಮಾಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನೂ ಪ್ರಮುಖವಾಗಿ ರಾಜ್ಯದಲ್ಲಿನ ನೀರಾವರಿ ಯೋಜನೆಗಳ ವಿಚಾರದಲ್ಲಿ ನೆರೆಯ ರಾಜ್ಯಗಳು ಅಡ್ಡಿಪಡಿಸುತ್ತಿವೆ. ಇದಲ್ಲದೆ ರಾಜ್ಯದಲ್ಲಿಯೂ ಇದೇ ವಿಚಾರಕ್ಕೆ ರಾಜಕೀಯ ನಡೆಯುತ್ತಿದೆ. ಮಹದಾಯಿ ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಅತ್ತ ಕಡೆ ಮೇಕೆದಾಟುಗೆ ತಮಿಳುನಾಡನ್ನು ಒಪ್ಪಿಸಿ ಎಂದು ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾಂಗ್ರೆಸ್‌ಅನ್ನು ಒತ್ತಾಯಿಸುತ್ತಿದ್ದಾರೆ. ಹೀಗೆ ತಮ್ಮದೇ ಆದ ರಾಜಕೀಯ ಕೆಸರೆರಚಾಟದಲ್ಲಿ ಈ ನಾಯಕರು ತೊಡಗಿಕೊಂಡಿದ್ದಾರೆ. ಈ ಎಲ್ಲವನ್ನೂ ನೀರಾವರಿಗಳು ಯಾವಾಗ ಪೂರ್ಣಗೊಳ್ಳುತ್ತವೆ ಎನ್ನುವುದೇ ರಾಜ್ಯದ ರೈತರಲ್ಲಿ ಮೂಡಿರುವ ಬಹು ದೊಡ್ಡ ಪ್ರಶ್ನೆಯಾಗಿದೆ.

