Saturday, November 8, 2025

Latest Posts

ಧನ ತ್ರಯೋದಶಿಯ ಮುನ್ನ ಚಿನ್ನದ ಮಾರ್ಕೆಟ್ ಸ್ಫೋಟ!

- Advertisement -

ಐದು ದಿನಗಳ ದೀಪಾವಳಿ ಹಬ್ಬಕ್ಕೆ ಆಧಾರವಾಗಿರುವ ಧನ ತ್ರಯೋದಶಿ ಈ ವರ್ಷದ ಅಕ್ಟೋಬರ್ 18ರಂದು ಶನಿವಾರದಂದು ಜರಗಲಿದೆ. ಈ ಪವಿತ್ರ ದಿನವನ್ನು ಹಿಂದೂ ಸಂಪ್ರದಾಯದಲ್ಲಿ ಧನ್ವಂತರಿ ಮತ್ತು ಸಂಪತ್ತಿನ ದೇವತೆ ಕುಬೇರನಿಗೆ ಅರ್ಪಿಸಲಾಗುತ್ತದೆ. ಇತ್ತೀಚೆಗಿನ ಧಾರ್ಮಿಕ ಮತ್ತು ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಧನ ತ್ರಯೋದಶಿಯು ವಿಶೇಷ ಗಮನ ಸೆಳೆದಿದೆ.

ಹಿಂದೂ ನಂಬಿಕೆ ಪ್ರಕಾರ, ಧನ ತ್ರಯೋದಶಿ ದಿನ ಬೆಳಿಗ್ಗೆ ಎದ್ದ ತಕ್ಷಣ ಚಿನ್ನ ಅಥವಾ ಬೆಳ್ಳಿ ನೋಡುವುದು ಅತ್ಯಂತ ಶುಭಕರ. ಈ ಕ್ರಮದಿಂದ ಸಂಪತ್ತು, ಶುಭ, ಮತ್ತು ಸಮೃದ್ಧಿಯ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಇರುವುದರಿಂದ, ಹಲವರು ತಮ್ಮ ಮನೆಯ ದೇವರ ಕೋಣೆಯಲ್ಲಿ ಚಿನ್ನಾಭರಣ ಅಥವಾ ನಾಣ್ಯವನ್ನು ಪವಿತ್ರವಾಗಿ ಇರಿಸುತ್ತಾರೆ.

ಈ ದಿನ ಮನೆ ಸಚ್ಚುಮಾಡಿ, ಲಕ್ಷ್ಮಿ ದೇವಿಗೆ ಸ್ವಾಗತಿಸುವ ದೃಷ್ಟಿಯಿಂದ ದೀಪಗಳನ್ನು ಹಚ್ಚುವುದು, ರಂಗೋಲಿ ಹಾಕುವುದು, ಮತ್ತು ಹೊಸ ವಸ್ತುಗಳನ್ನು ಖರೀದಿಸುವುದು ಮುಖ್ಯ ಆಚರಣೆಗಳು. ವಿಶೇಷವಾಗಿ ಚಿನ್ನ, ಬೆಳ್ಳಿ, ಪಾತ್ರೆ ಅಥವಾ ದೀರ್ಘಕಾಲ ಬಳಸಬಹುದಾದ ವಸ್ತುಗಳನ್ನು ಖರೀದಿಸುವುದು ಶುಭ ಎಂದೇ ಪರಿಗಣಿಸಲಾಗಿದೆ.

ಧನ ತ್ರಯೋದಶಿಯ ಸಂದರ್ಭದಲ್ಲಿ ವಹಿವಾಟಿನಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದರೆ, ಬೆಳ್ಳಿ ಬೆಲೆ ಇಳಿಕೆಯಾಗಿದೆ.

ಶೇ 99.9ರಷ್ಟು ಪರಿಶುದ್ಧತೆ 10 ಗ್ರಾಂ ಚಿನ್ನದ ದರವು 3,200 ಹೆಚ್ಚಳವಾಗಿ, ₹1,34,800ರಂತೆ ಮಾರಾಟವಾಗಿದೆ. ಶೇ 99.5ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ಬೆಲೆ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹1,34,200 ಆಗಿದೆ. ಆದರೆ, ಬೆಳ್ಳಿ ಕೆ.ಜಿಗೆ ₹7 ಸಾವಿರ ಕಡಿಮೆಯಾಗಿ, ₹1.77 ಲಕ್ಷವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಚಿನ್ನಾಭರಣಗಳ ಖರೀದಿಗೆ ಶುಭ ದಿನ ಎಂದು ಧನತ್ರಯೋದಶಿ ಪರಿಗಣಿತವಾಗಿದೆ. ಇದು ಹತ್ತಿರವಾಗುತ್ತಿರುವ ಕಾರಣಕ್ಕೆ ಆಭರಣ ತಯಾರಕರು ಮತ್ತು ಮಾರಾಟಗಾರರಿಂದ ಚಿನ್ನದ ಖರೀದಿ ಹೆಚ್ಚಳವಾಗಿದೆ. ಇದರಿಂದ ಹಳದಿ ಲೋಹದ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss