ನೆಲಕ್ಕಚ್ಚಿದ ಬಂಗಾರ ಬೆಲೆ: 1 ಗ್ರಾಂ ಚಿನ್ನಕ್ಕೆ ಕೇವಲ ₹181

ಚಿನ್ನ ಜಗತ್ತಿನಾದ್ಯಂತ ಶ್ರೀಮಂತಿಕೆಯ ಸಂಕೇತ. ಅತ್ಯಂತ ಅಮೂಲ್ಯ ಲೋಹವೆಂದೇ ಪ್ರಸಿದ್ಧ. ಆದರೆ ವೆನೆಜುವೆಲಾದಲ್ಲಿ ಚಿನ್ನದ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಲ್ಲಿ ಒಂದು ಕಪ್ ಕಾಫಿ ಅಥವಾ ಒಂದು ಬ್ರೆಡ್ ಪ್ಯಾಕೆಟ್ ಖರೀದಿಸುವ ಬೆಲೆಗೆ ಒಂದು ಗ್ರಾಂ ಚಿನ್ನ ಸಿಗುತ್ತಿದೆ ಎಂದರೆ ನಂಬಲೇಬೇಕು!
ಕುಸಿಯುತ್ತಿರುವ ಆರ್ಥಿಕತೆ ಹಾಗೂ ಮೌಲ್ಯ ಕಳೆದುಕೊಳ್ಳುತ್ತಿರುವ ಕರೆನ್ಸಿಯ ಪರಿಣಾಮವಾಗಿ, ವೆನೆಜುವೆಲಾದಲ್ಲಿ ಚಿನ್ನದ ಬೆಲೆ ಅಚ್ಚರಿಯ ಮಟ್ಟಕ್ಕೆ ಇಳಿದಿದೆ.

ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವಾಗ, ವೆನೆಜುವೆಲಾದಲ್ಲಿ ಚಿನ್ನ ಚಿಲ್ಲರೆ ಕಾಸಿನ ದರಕ್ಕೆ ಸಿಗುತ್ತಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ – 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನಕ್ಕೆ ಸುಮಾರು ₹181. 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನಕ್ಕೆ ಸುಮಾರು ₹166
ಅಂದರೆ, ಭಾರತದಲ್ಲಿ ಒಂದು ಕಪ್ ಚಹಾ ಅಥವಾ ಒಂದು ಲೀಟರ್ ಹಾಲು ಖರೀದಿಸುವ ಹಣಕ್ಕೆ, ವೆನೆಜುವೆಲಾದಲ್ಲಿ ಒಂದು ಗ್ರಾಂ ಅಪ್ಪಟ ಬಂಗಾರ ದೊರೆಯುತ್ತಿದೆ.

ಚಿನ್ನ ಅಗ್ಗವಾಗಿರುವುದು ಆ ದೇಶದ ಆರ್ಥಿಕ ಬಲದ ಸೂಚಕವಲ್ಲ.
ಬದಲಿಗೆ, ವೆನೆಜುವೆಲಾದ ಕರೆನ್ಸಿಯಾದ ‘ಬೊಲಿವರ್’ ಅನುಭವಿಸುತ್ತಿರುವ ಐತಿಹಾಸಿಕ ಕುಸಿತವೇ ಇದಕ್ಕೆ ಪ್ರಮುಖ ಕಾರಣ. ದಶಕಗಳಿಂದ ಮುಂದುವರಿದಿರುವ ತೀವ್ರ ಹಣದುಬ್ಬರ, ರಾಜಕೀಯ ಅಸ್ಥಿರತೆ ಹಾಗೂ ಆಡಳಿತ ವೈಫಲ್ಯದಿಂದಾಗಿ, ವೆನೆಜುವೆಲಾ ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಲುಪಿದೆ. ಸಾಲ ತೀರಿಸುವ ಸಲುವಾಗಿ ಸರ್ಕಾರವು ಟನ್ ಗಟ್ಟಲೆ ಚಿನ್ನವನ್ನು ವಿದೇಶಗಳಿಗೆ ಮಾರಾಟ ಮಾಡಿದೆ.

ವೆನೆಜುವೆಲಾ ಜಗತ್ತಿನಲ್ಲೇ ಅತ್ಯಂತ ಸಂಪನ್ಮೂಲಸಂಪನ್ನ ರಾಷ್ಟ್ರಗಳಲ್ಲೊಂದು. ಇಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪ ಇದೆ. ಅಷ್ಟೇ ಅಲ್ಲ, ‘ಒರಿನೊಕೊ ಮೈನಿಂಗ್ ಆರ್ಕ್’ ಪ್ರದೇಶದಲ್ಲಿ ಸುಮಾರು 8,000 ಟನ್ ಚಿನ್ನದ ಅಡಿಪಾಯ ಇದೆ ಎನ್ನಲಾಗುತ್ತದೆ. ಆದರೆ, ಸರ್ಕಾರದ ತಪ್ಪು ನೀತಿಗಳು, ಅಸಮರ್ಥ ಆಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿವೆ.

About The Author