SSLC ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಕರಡು ನಿಯಮಾವಳಿ ಪ್ರಕಟಿಸಿದೆ. ಇನ್ಮುಂದೆ, 33 ಅಂಕ ಪಡೆದರೂ, ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ.
ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡೂ ಸೇರಿ ಪಾಸ್ ಮಾರ್ಕ್ಸ್ ಬಂದರೆ ಸಾಕು. ಆಂತರಿಕ ಮೌಲ್ಯಮಾಪನದಲ್ಲಿ 20 ಅಂಕ, ಲಿಖಿತ ಪರೀಕ್ಷೆಯಲ್ಲಿ 13 ಅಂಕ ಪಡೆದರೆ ಪಾಸ್ ಆಗಲಿದ್ದಾರೆ.
ಇನ್ಮುಂದೆ, 625ಕ್ಕೆ 206 ಗಳಿಸಿದ ವಿದ್ಯಾರ್ಥಿಗಳು, ಬೇರೆ ವಿಷಯದಲ್ಲಿ ಶೇಕಡ 30ಕ್ಕಿಂತ ಕಡಿಮೆ ಅಂಕ ಬಂದ್ರೂ ಪಾಸ್ ಆಗ್ತಾರೆ. ಇದುವರೆಗೆ 35 ಪರ್ಸೆಂಟ್ ಪಡೆದ್ರೆ ಪಾಸ್ ಆಗ್ತಿದ್ದ ವಿದ್ಯಾರ್ಥಿಗಳು, ಇದೀಗ 33 ಪರ್ಸೆಂಟ್ ಪಡೆದರೆ ಸಾಕು.
ಈವರೆಗೆ ಕನ್ನಡ ಸೇರಿ ಪ್ರಥಮ ಭಾಷಾ ವಿಷಯಕ್ಕೆ 125 ಅಂಕಗಳು, ಉಳಿದ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ಬರೆಯಬೇಕಿತ್ತು. ಇನ್ಮುಂದೆಯೂ ಇದೇ ಅಂಕ ಪದ್ಧತಿ ಮುಂದುವರೆಯಲಿದ್ದು, ಪಾಸಾಗಲು ಬೇಕಿರುವ ಅಂಕದಲ್ಲಿ ಮಾತ್ರ ಬದಲಾವಣೆ ಆಗಲಿದೆ.
ಪ್ರಥಮ ಭಾಷೆಗಳಲ್ಲಿ 44 ಅಂಕಕ್ಕೆ ಬದಲಾಗಿ, ಕನಿಷ್ಠ 42 ತೆಗೆದರೆ ಪಾಸಾಗಲಿದ್ದಾರೆ. ಆಂತರಿಕ ಪರೀಕ್ಷೆಯಲ್ಲಿ 25 ಅಂಕ, ಲಿಖಿತ ಪರೀಕ್ಷೆಯಲ್ಲಿ 17 ಅಂಕ ಪಡೆದರೂ ತೇರ್ಗಡೆಯಾಗಲಿದ್ದಾರೆ.
ಪ್ರಮುಖವಾಗಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲಾ ಮಕ್ಕಳು, ಇನ್ಮುಂದೆ CBSE ಮಾದರಿಯಲ್ಲೇ ಪರೀಕ್ಷೆ ಎದುರಿಸಲಿದ್ದಾರೆ. ನಿಯಮಾವಳಿ ಪ್ರಕಾರ 15 ದಿನಗಳ ಬಳಿಕ ಅಧಿಕೃತವಾಗಿ ಜಾರಿಗೆ ಬರಲಿದೆ.

