Friday, July 18, 2025

Latest Posts

ಕಾರ್ಮಿಕರಿಗೆ ಗುಡ್‌ನ್ಯೂಸ್‌ : EPF ಹಣಕ್ಕೆ ಕಾಯಬೇಕಿಲ್ಲ

- Advertisement -

EPF ಅಕೌಂಟ್​​ನಿಂದ ಪೂರ್ಣ ಹಣ ಹಿಂಪಡೆಯಬೇಕೆಂದರೆ ಕಾರ್ಮಿಕರು ನಿವೃತ್ತಿ ಆಗೋವರೆಗೂ ಕಾಯಬೇಕು. ಇಲ್ಲವೇ ಕೆಲಸ ಕಳೆದುಕೊಂಡು ಮೂರು ತಿಂಗಳು ನಿರುದ್ಯೋಗಿಯಾಗಿರಬೇಕು. ಸರ್ಕಾರ ಈ ಸಂಬಂಧ ಕೆಲ ನಿರ್ಬಂಧಗಳನ್ನು ಸಡಿಲಿಸಿ ಹೊಸ ನಿಯಮ ರೂಪಿಸಿದೆ. ಪ್ರತೀ 10 ವರ್ಷಕ್ಕೊಮ್ಮೆ EPF ಹಣವನ್ನು ಪೂರ್ಣವಾಗಿ ಹಿಂಪಡೆಯುವ ಅವಕಾಶವನ್ನು ನೀಡಿದೆ ಎಂದು ಮನಿಕಂಟ್ರೋಲ್ ವೆಬ್​ಸೈಟ್ ತನ್ನ ಎಕ್ಸ್​ಕ್ಲೂಸಿವ್ ವರದಿಯಲ್ಲಿ ತಿಳಿಸಿದೆ.

ಒಂದೊಮ್ಮೆ 10 ವರ್ಷಕ್ಕೆ ಪೂರ್ಣ ಬ್ಯಾಲನ್ಸ್ ಮೊತ್ತ ಹಿಂಪಡೆಯಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳದೇ ಹೋದರೂ, ಶೇ. 60ರಷ್ಟನ್ನಾದರೂ ವಿತ್​ಡ್ರಾ ಮಾಡಲು ಅನುಮತಿಸಬಹುದು. ಈ ವಿಚಾರವನ್ನೂ ಸರಕಾರ ಅವಲೋಕಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 7.4 ಇಪಿಎಫ್ ಸದಸ್ಯರನ್ನು ಹೊಂದಿದ್ದು, ಅವರೆಲ್ಲರ EPF ಅಕೌಂಟ್​​ಗಳಲ್ಲಿ ಇರುವ ಹಣ ಬರೋಬ್ಬರಿ 25 ಲಕ್ಷ ಕೋಟಿ ರೂಪಾಯಿ ಆಗಿದೆ.

ಈಗ 10 ವರ್ಷದ ವಿತ್​​ಡ್ರಾ ನಿಯಮದ ಪ್ರಕಾರ, ಹಣ ಹಿಂಪಡೆಯಲು ಯಾವುದೇ ಕಾರಣ ನೀಡುವ ಅಗತ್ಯ ಇರುವುದಿಲ್ಲ. EPF ಸದಸ್ಯರು ತಮ್ಮ ಹಣವನ್ನು ಬೇರೆಲ್ಲಿಯಾದರೂ ಹೂಡಕೆ ಮಾಡಬಹುದು. ಸದ್ಯ ಇಪಿಎಫ್​​ನಲ್ಲಿ ಶೇ. 8.25ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಅದರ ಬದಲು ಜನರು ಶೇ. 10-16 ವಾರ್ಷಿಕ ಲಾಭ ತರುವ ಮ್ಯುಚುವಲ್ ಫಂಡ್​ಗಳಲ್ಲಿಯೋ, ಷೇರುಗಳಲ್ಲಿಯೋ ಹೂಡಿಕೆ ಮಾಡಬಹುದು. ಈ ಕಾರಣಕ್ಕೆ ಸರ್ಕಾರವು 10 ವರ್ಷದ ನಿಯಮ ರೂಪಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇಪಿಎಫ್ ಹಣ ಹಿಂಪಡೆಯಲು ಈಗಲೂ ಕೂಡ 10 ವರ್ಷ ಕಾಯಬೇಕಿಲ್ಲ. ಮನೆ ನಿರ್ಮಾಣ, ವೈದ್ಯಕೀಯ ತುರ್ತು ಚಿಕಿತ್ಸೆ, ಶಿಕ್ಷಣ, ಮದುವೆ ಕಾರಣಗಳಿಗೆ ಇಪಿಎಫ್ ಅಕೌಂಟ್​ನಿಂದ ಅಡ್ವಾನ್ಸ್ ಹಣ ಹಿಂಪಡೆಯಲು ಅವಕಾಶ ಇದೆ. ನಿವೇಶನ ಖರೀದಿಸಲು ಅಥವಾ ಮನೆ ನಿರ್ಮಾಣ ಮಾಡಲು ಶೇ. 90ರವರೆಗೆ ಇಪಿಎಫ್ ಹಣ ಹಿಂಪಡೆಯಬಹುದು. ಈ ಮೊದಲು ಐದು ವರ್ಷ ಪಿಎಫ್ ಅಕೌಂಟ್​ನಿಂದ ಯಾವುದೇ ಹಣ ಹಿಂಪಡೆಯದೇ ಇದ್ದಾಗ ಮನೆ ನಿರ್ಮಾಣಕ್ಕೆ ಹಣ ಹಿಂಪಡೆಯಬಹುದಿತ್ತು. ಅದನ್ನು ಈಗ ಮೂರು ವರ್ಷಕ್ಕೆ ಇಳಿಸಲಾಗಿದೆ. ತುರ್ತು ಸಂದರ್ಭಗಳಿಗೆ ಹಣದ ಅವಶ್ಯಕತೆ ಪೂರೈಸಲು ಈ ಅವಕಾಶ ಕೊಡಲಾಗುತ್ತಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss