ಮದುವೆಯಾದ 15 ದಿನಕ್ಕೆ ಯುವತಿಯೊಬ್ಬಳು ಪ್ರಿಯತಮನಿಗಾಗಿ ಗಂಡನನ್ನು ಬಿಟ್ಟು ಆಂಧ್ರದಿಂದ ಕರ್ನಾಟಕದ ಕೊಪ್ಪಳಕ್ಕೆ ಬಂದಿದ್ದಾಳೆ. ಕೊಪ್ಪಳದ ವೆಂಕಟೇಶ್ ಎಂಬ ಯುವಕ, ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಗಾರೆ ಕೆಲಸಕ್ಕೆ ಹೋಗಿದ್ದ. ಅಲ್ಲಿ ಆಂಧ್ರ ಮೂಲದ ಲೇಬರ್ ಕಾಂಟ್ರ್ಯಾಕ್ಟರ್ ಜೊತೆ ಕೆಲಸ ಮಾಡುತ್ತಿದ್ದ. ಅದೇ ಸಂದರ್ಭದಲ್ಲಿ ಅವರ ಮಗಳು ತಿರುಪತೆಮ್ಮ ಜೊತೆ ಪ್ರೀತಿ ಪ್ರೇಮ ಶುರುವಾಯ್ತು.
ಮನೆಯಲ್ಲಿ ಇಬ್ಬರ ಪ್ರೀತಿಯ ವಿಷಯ ಗೊತ್ತಾಗಿ ಯುವತಿಯ ಪೋಷಕರು ಆಕೆಯ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬಲವಂತವಾಗಿ ಆಕೆಗೆ ಬೇರೆ ಮದುವೆ ಕೂಡ ಮಾಡಿದರು. ಆದರೆ ಮದುವೆಯಾದವಳ ಮನಸ್ಸು ಒಪ್ಪಲಿಲ್ಲ. ಪತಿಯ ಜೊತೆ 15 ದಿನ ಕಳೆದಿದ್ದರೂ ಮನಸ್ಸು ಪ್ರೀತಿಯ ಹುಡುಗನ ಬಳಿ ಇತ್ತು. ಅಂತಿಮವಾಗಿ ಪತಿಯ ಮನೆಯಿಂದ ಓಡಿ ಹೋಗಿ ತಲುಪಿದ್ದಾಳೆ.
ಆಂಧ್ರದ ಪಲ್ನಾಡು ಜಿಲ್ಲೆ, ರಂಪಚಾರು ತಾಲ್ಲೂಕಿನ ಕರ್ಲಕುಂಟ ಗ್ರಾಮದಿಂದ ಬಂದ ಯುವತಿ, ಕೊಪ್ಪಳದ ವೆಂಕಟೇಶ್ ಜೊತೆ ಸೇರಿರುವ ಸುದ್ದಿ ಆಕೆಯ ಮನೆತನಕ್ಕೆ ಹೊಡೆತವಾಯ್ತು. ಈಗ ಆಕೆಯ ಪೋಷಕರು ನಾಲ್ಕು ಕಾರುಗಳಲ್ಲಿ ಕೊಪ್ಪಳಕ್ಕೆ ಬಂದು, ಜೋಡಿಯ ಹುಡುಕಾಟದಲ್ಲಿ ತೊಡಗಿದ್ದು, ಅವರನ್ನು ಎಲ್ಲಿ ನೋಡಿದರೂ ಅಲ್ಲಿಯೇ ಕೊಲೆ ಮಾಡುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರಸಂಗನಾಳ ಗ್ರಾಮದ ಯುವಕ ವೆಂಕಟೇಶ ಹಾಗೂ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆ ರಂಪಚಾರು ತಾಲೂಕು ಕರ್ಲಕುಂಟ ಗ್ರಾಮದ ತಿರುಪತೆಮ್ಮ ಲವ್ ಕಹಾನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಯುವತಿಯು ತನ್ನ ಇಚ್ಛೆಯಿಂದ ಬಂದಿದ್ದಾಳೆ ಎಂದು ಹೇಳಿದ್ದಾರೆ. ಈ ಸಂಬಂಧ ಕಾನೂನು ಪ್ರಕ್ರಿಯೆ ಆರಂಭವಾಗಿದೆ. ಆದರೆ ಪೋಷಕರ ಧಮಕಿ ಹಾಗೂ ಭದ್ರತಾ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ ಎಂದಿದ್ದಾರೆ.