Sunday, September 8, 2024

Latest Posts

ಗೋಪಿ ಚಂದನದ ಗಣೇಶ…!

- Advertisement -

www.karnatakatv.net :ರಾಯಚೂರು: ಪ್ರತೀ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬವನ್ನ ಸಾರ್ವಜನಿಕವಾಗಿ ಅದ್ದೂರಿ ಆಚರಣೆಯ ವಿಚಾರಕ್ಕೆ ಇದುವರೆಗೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಮಣ್ಣಿನ ಗಣೇಶ ಹಾಗೂ ಪಿಒಪಿ ಗಣೇಶ ಮೂರ್ತಿಗಳನ್ನ ನೀವೆಲ್ಲಾ ನೋಡೇ ಇರ್ತೀರಿ. ಇಲ್ಲೊಂದು ಕಡೆ  ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದಿರುವ ಗೋಪಿ ಚಂದನದಿಂದ ಗಣೇಶನ ಮೂರ್ತಿಗಳು ತಯಾರಾಗಿವೆ. ಅಲ್ಲದೇ ಈ ಗಣೇಶನಿಗೆ ಬಹು ಬೇಡಿಕೆಯೂ ಶುರುವಾಗಿದೆ.

ರಾಯಚೂರಿನ ಜಯತೀರ್ಥದಾಸರ ಕುಟುಂಬವು ಇಂಥದ್ದೊಂದು ವಿಶೇಷ ಗೋಪಿ ಚಂದನದಲ್ಲಿ ಗಣೇಶ ಮೂರ್ತಿ ತಯಾರಿಕೆ ಮಾಡುತ್ತಿದ್ದಾರೆ. ಜಯತೀರ್ಥರ ಮಗ ರಘೋತ್ತಮದಾಸರು ಇಂಟಿರಿಯರ್ ಡಿಸೈನ್ ಮಾಡುವ ಉದ್ಯೋಗ ಮಾಡ್ತಿದ್ದಾರೆ. ಹಾಗಾಗಿ ಅವರು ಮೊದಲು ಮಣ್ಣಿನಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸೋಕೆ ಮುಂದಾದ್ರು. ಅಷ್ಟಕ್ಕೂ ಈ ಗಣೇಶ ಮೂರ್ತಿ ತಯಾರು ಮಾಡೋಕೆ ಅವರಿಗೆ ಆಕರ್ಷಿತವಾಗಿದ್ದೇ ಅವರ ತಾಯಿಯ ತವರ ಮನೆ ಕೊಪ್ಪಳದ ಕಿನ್ನಾಳದ ಅಜ್ಜಿ ಮನೆಯಿಂದ. ಸಾಮನ್ಯವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನ ಎಲ್ಲರೂ ಮಾಡುತ್ತಾರೆ. ಆದರೆ ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಗೋಪಿ ಚಂದನದಲ್ಲಿ ಯಾಕೆ ಗಣಪನ ತಯಾರಿಸಬಾರದು ಎಂದುಕೊಂಡು ಕಳೆದ ವರ್ಷದಿಂದ ಪವಿತ್ರವಾದ ಗೋಪಿ ಚಂದನದಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಮೊದಲು 300  ಗಣಪತಿಯಿಂದ ಆರಂಭವಾದ ಇವರ ಜರ್ನಿ ಇದೀಗ ದೇಶದ ಮೂಲೆ ಮೂಲೆಗಳಲ್ಲೂ ಸಂಚರಿಸುತ್ತಿದೆ.

ಇನ್ನು ಗೋಪಿ ಚಂದನವು ಶ್ರೀಕೃಷ್ಣನಿಗೆ ಗೋಪಿಕರು ಹಚ್ವಿದರು ಎಂಬ ಪ್ರತೀತಿ ಇದೆ. ಪುರಾಣದಲ್ಲಿ ವಿಶ್ವಂಬರವಾದ ಪರಮಾತ್ಮ ಗಣೇಶನನ್ನು ಗೋಪಿಚಂದನದಲ್ಲಿ ಮಾಡಿದ್ದ ಎಂದೂ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೋಪಿ ಚಂದನದಲ್ಲಿ ಗಣೇಶನ ಪೂಜಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ಭಾವನೆ ಇದೆ. ಈ ಹಿನ್ನಲೆಯಲ್ಲಿ ಕಳೆದ ವರ್ಷದಿಂದ‌ ಗೋಪಿ ಚಂದನದಲ್ಲಿ ಗಣೇಶನ ತಯಾರಿಸಿದ್ದು ಇದಕ್ಕೆ ಸಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿದೆ. ಈಗ ರಾಜ್ಯ ಹಾಗೂ ಹೊರರಾಜ್ಯದಲ್ಲಿ ಗೋಪಿಚಂದನ ಗಣಪನಿಗೆ ಬಹುಬೇಡಿಕೆ ಶುರುವಾಗಿದೆ. ಒಂದು ಗಣೇಶನಿಗೆ 6 ಕೆಜಿ ಗೋಪಿಚಂದನ ಬೇಕಾಗುತ್ತದೆ. ಹಾಗಾಗಿ ಒಂದು ಗಣೇಶ ಮೂರ್ತಿ ತಯಾರಿಸಲು ಒಟ್ಟು 750 ರೂಪಾಯಿಗಿಂತ ಅಧಿಕ ಖರ್ಚಾಗುತ್ತಿದೆ. ಹೀಗೇ ತಯಾರಿಸಿದ ಗಣೇಶ ಮೂರ್ತಿಗಳನ್ನ 1000ರೂಪಾಯಿಗೆ ಒಂದರಂತೆ ಮಾರಾಟ ಮಾಡಲಾಗ್ತದೆ. ಕಳೆದ ವರ್ಷ 300 ಗಣೇಶ ಮೂರ್ತಿ ತಯಾರಿಸಿದ್ದ ಕುಟುಂಬಸ್ಥರು ಈಗ ಸಾವಿರಾರು ಮೂರ್ತಿಗಳನ್ನ ತಯಾರಿಸುತ್ತಿದ್ದಾರೆ‌. ಗುಜರಾತ ಸೇರಿದಂತೆ ಹೊರರಾಜ್ಯದಲ್ಲಿ ಬೇಡಿಕೆ ಇರೋದ್ರಿಂದ ಇಡೀ ಕುಟುಂಬವೇ ಈಗ ಗೋಪಿಚಂದನ ಗಣೇಶನ ಮೂರ್ತಿ ತಯಾರಿಸಲು ಮುಂದಾಗಿದೆ. ಅಷ್ಟೇ ಅಲ್ಲ ಈ ಗೋಪಿ ಚಂದನ ಗಣಪತಿ ಪರಿಸರ ಸ್ನೇಹಿಯಾಗಿದ್ದು, ಇದನ್ನ ಹಬ್ಬ ಮುಗಿದ ಬಳಿಕ ಕೆರೆ, ನದಿ, ಬಾವಿಯಲ್ಲಿ ವಿಸರ್ಜಿಸದೇ ಮನೆಯಲ್ಲೇ ಬಕೆಟ್ ನಲ್ಲು ವಿಸರ್ಜಿಸಬಹುದಾಗಿದೆ. ಹಾಗೆ ವಿಸರ್ಜಿಸಿದ ಗಣೇಶನನ್ನ ಪ್ರಸಾದವಾಗೀಯೂ ಬಳಕೆ ಮಾಡಬಹುದು, ಸೌಂದರ್ಯ ವೃದ್ಧಿಗೂ ಬಳಸಬಹುದು ಅಂತಾರೆ ತಯಾರಕರು.

ಒಟ್ನಲ್ಲಿ ಈ ಬಾರಿ ಪರಿಸರ ಸ್ನೇಹಿ ಗಣಪನನ್ನ ಪ್ರತಿಷ್ಟಾಪಿಸಲು ಹೆಚ್ಚು ಜನರು ಉತ್ಸುಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಗಣೇಶ ಮೂರ್ತಿಗಳಿಗೆ ಬಾರೀ ಬೇಡಿಕೆ ಬರೋ ಎಲ್ಲಾ ಸಾಧ್ಯತೆಗಳಿವೆ.

ಅನೀಲ್ ಕುಮಾರ್, ಕರ್ನಾಟಕ ಟಿವಿ-  ರಾಯಚೂರು

- Advertisement -

Latest Posts

Don't Miss