ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ, ರಾಜ್ಯ ಸರ್ಕಾರ ಜನವರಿ 14ರಂದು ಬೆಳಗ್ಗೆ 11.30ಕ್ಕೆ ವಿಶೇಷ ತುರ್ತು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮನರೇಗಾ ಹೆಸರನ್ನು ಹಾಗೂ ಅದರ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದನ್ನ ವಿರೋಧಿಸಿ, ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆಯುವ ಕುರಿತು ಈ ತುರ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
2025ನೇ ಸಾಲಿನ ವಿಧಾನಮಂಡಲ ಅಧಿವೇಶನ ಈಗಾಗಲೇ ಮುಕ್ತಾಯಗೊಂಡಿದ್ದು, 2026ನೇ ಸಾಲಿನ ಅಧಿವೇಶನವು ಸಂಪ್ರದಾಯದಂತೆ ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಬೇಕಿದೆ. ಆದರೆ ಆ ಅಧಿವೇಶನಕ್ಕೆ ಮುನ್ನವೇ ವಿಶೇಷ ಅಧಿವೇಶನವನ್ನು ಕರೆಯುವ ಪರಂಪರೆ ಇಲ್ಲದಿದ್ದರೂ, ಈ ಬಾರಿ ವಿಶೇಷ ಅಧಿವೇಶನದಲ್ಲೇ ರಾಜ್ಯಪಾಲರ ಭಾಷಣಕ್ಕೆ ಅವಕಾಶ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.
ಅದರೊಂದಿಗೆ, ರಾಜ್ಯಪಾಲರ ಭಾಷಣದಲ್ಲಿ ಮನರೇಗಾ ಯೋಜನೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶವೂ ಸರ್ಕಾರ ಹೊಂದಿದೆ ಎನ್ನಲಾಗಿದೆ.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ವಿಶೇಷ ತುರ್ತು ಸಚಿವ ಸಂಪುಟ ಸಭೆಯಲ್ಲಿ, ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧವಾಗಿ ವಿಶೇಷ ಅಧಿವೇಶನವನ್ನು ಕರೆಯುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ




