ರಾಜ್ಯಾದ್ಯಂತ ಸಾರಿಗೆ ನೌಕರರ ಬಂದ್ ಬಿಸಿ ತೀವ್ರಗೊಳ್ಳುತ್ತಿದೆ. ಒಂದೇ ದಿನಕ್ಕೆ ರಾಜ್ಯದ ಹಲವು ಕಡೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಪ್ರಯಾಣಿಕರ ಪರದಾಟಕ್ಕೆ ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿದೆ. ನೌಕರರ ಮುಷ್ಕರಕ್ಕೆ ಜನಸಾಮಾನ್ಯರು ಬೆಂಬಲ ಕೊಡ್ತಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಛೀಮಾರಿ ಹಾಕ್ತಿದ್ದಾರೆ.
ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಬಗ್ಗೆ, ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸಂಘಟನೆಗಳು ಕೇಳುತ್ತಿರುವ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಪಾವತಿ ಸಾಧ್ಯವಿಲ್ಲ ಅಂತಾ, ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. 2016ರಲ್ಲಿ ಸಿಎಂ ಆಗಿದ್ದಾಗ, ಶೇಕಡ 12.5ರಷ್ಟುಹೆಚ್ಚಳ ಮಾಡಿದ್ದೆ. 2020ರಲ್ಲಿ ಕೋವಿಡ್ ಕಾರಣದಿಂದ, ಪರಿಷ್ಕರಣೆ ಆಗಿಲ್ಲ. 2023ರ ಮೇನಲ್ಲಿ ವೇತನ ಪರಿಷ್ಕರಣೆ ಆಗಿದೆ. ಮೂಲವೇತನದ ಶೇಕಡ 15ರಷ್ಟು, ಪರಿಷ್ಕರಣೆ ಮಾಡಲು ತೀರ್ಮಾನವಾಗಿತ್ತು. ಆಗ ನೀವು ಒಪ್ಪಿಕೊಂಡಿದ್ದೀರಿ. ಸದ್ಯ, ಯಾವ ಸಾರಿಗೆ ನಿಗಮವೂ ಲಾಭದಲ್ಲಿಲ್ಲ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲಾ ನಿಗಮದವರು ಸಹಕರಿಸಬೇಕೆಂದು, ಸಿಎಂ ಮನವಿ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮಾತನಾಡಿ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಅಂತಾ ರಿಕ್ವೆಸ್ಟ್ ಮಾಡಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳನ್ನು ತಪ್ಪು ಅಂತಾ, ನಾವ್ಯಾರು ಹೇಳಲ್ಲ. ಸರ್ಕಾರದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಅವರಿಗೆ ಸಹಾಯ ಮಾಡಬೇಕು ಎಂದೇ ಇದ್ದಾರೆ. ನಾಗರೀಕರಿಗೆ ಪ್ರಾಮುಖ್ಯತೆ ಕೊಡಿ. ಮಾಡಲು ಆಗದ್ದನ್ನೂ ಮಾಡಿ ಅಂದ್ರೆ ಹೇಗೆ ಅಂತಾ ಹೇಳಿದ್ರು.
ನಮಗೆ ನಾಗರೀಕರು ಇಂಪಾರ್ಟೆಂಟ್. ದಯವಿಟ್ಟು ಎಲ್ಲಾ ಸಹಕಾರ ಕೊಡಿ. ಕೆಲವು ಡ್ರೈವರ್ಸ್, ಕಂಡಕ್ಟರ್ಸ್ ಡ್ಯೂಟಿಗೆ ಬಂದಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ. ಸಾರ್ವಜನಿಕರ ಬದುಕು ತುಂಬಾ ಮುಖ್ಯ. ನೀವು ಹಠ ಮಾಡೋದ್ರಲ್ಲಿ ಅರ್ಥ ಇಲ್ಲ. ಏನಾದರೂ ಸಹಾಯ ಮಾಡೋದಾದ್ರೆ, ಸಿಎಂ ಖಂಡಿತ ಮಾಡ್ತಾರೆ. ನಾವು ಕಾನೂನು ಗೌರವ ಕೊಡೋದಿಲ್ಲ ಅಂತಾ ಹಠ ಮಾಡಬಾರದು. ಸಮಾಜಸೇವೆಗೆ ನೀವು ಬಂದಿದ್ದೀರಿ. ಗೌರವ ಕೊಡಿ ಅಂತಾ ಡಿಕೆಶಿ ಕೂಡ ಮನವಿ ಮಾಡಿದ್ರು.
ಸಾರಿಗೆ ಮುಷ್ಕರದ ಬಗ್ಗೆ ನನಗೆ ಗೊತ್ತೇ ಇಲ್ಲ ಅಂತಾ, ಗೃಹ ಸಚಿವ ಪರಮೇಶ್ವರ್ ಶಾಕ್ ನೀಡಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡ್ತಾರೆ. ಸಣ್ಣಪುಟ್ಟ ಘಟನೆಗಳು ನಡೆದಿವೆ. ದೊಡ್ಡ ಘಟನೆಗಳೇನು ನಡೆದಿಲ್ಲ. ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಕೊಟ್ಟಿದ್ದಾರೆ. ಸಾರಿಗೆ ನೌಕರರ ಒಂದು ಗುಂಪು ಮುಷ್ಕರ ಮಾಡ್ತಿದ್ದಾರೆ ಅಂತಾ ಹೇಳಿ, ಹೊರಟೇ ಬಿಟ್ರು.
ರಾಜ್ಯ ಸರ್ಕಾರ ಬೇಡಿಕೆ ಈಡೇರಿಸ್ತಿಲ್ಲ.. ಸಾರಿಗೆ ನೌಕರರು ಬಿಡ್ತಿಲ್ಲ. ಇವರಿಬ್ಬರ ನಡುವೆ ಜನಸಾಮಾನ್ಯರಿಗೆ ತೊಂದರೆ ಆಗ್ತಿರೋದಂತು ಸತ್ಯ.