ಬೈಕ್ ಕಳ್ಳರ ವಿರುದ್ಧ ಮಂಡ್ಯ ಪೂರ್ವ ಪೊಲೀಸ್ ಠಾಣೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ವಿವಿಧೆಡೆ ಕ್ಷಣಾರ್ಧದಲ್ಲಿ ಬೈಕ್ಗಳನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮರ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 27 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ ಸುಮಾರು 14 ಲಕ್ಷ ರೂಪಾಯಿಯಾಗಿದೆ.

ಮಂಡ್ಯ ತಾಲ್ಲೂಕಿನ ಕಾಗೇಹಳ್ಳದೊಡ್ಡಿ ನಿವಾಸಿ ಚಂದ್ರಶೇಖರ್ ಎಂಬಾತ ರೈತರು ಮನೆ ಹಾಗೂ ಜಮೀನಿನ ಬಳಿ ನಿಲ್ಲಿಸಿದ್ದ ಬೈಕ್ಗಳನ್ನು ಟಾರ್ಗೆಟ್ ಮಾಡಿ, ವಿಶೇಷವಾಗಿ TVS XL ಬೈಕ್ಗಳನ್ನು ಕಳವು ಮಾಡುತ್ತಿದ್ದ. ಬಳಿಕ ಅವುಗಳನ್ನು ಇತರರಿಗೆ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆರೋಪಿಯಿಂದ ಸುಮಾರು 5.75 ಲಕ್ಷ ರೂಪಾಯಿ ಮೌಲ್ಯದ 15 TVS XL ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಳವಳ್ಳಿ, ಸಾತನೂರು, ಹಲಗೂರು, ಕಿರುಗಾವಲು ಸೇರಿದಂತೆ ಹಲವು ಕಡೆಗಳಲ್ಲಿ ಈತ ಕೃತ್ಯ ಎಸಗಿದ್ದಾನೆ.

ಇನ್ನೊಂದೆಡೆ ಮೈಸೂರು ಜಿಲ್ಲೆಯ ರಿಹಾನ್ ಪಾಷ, ಸೈಯದ್ ಅಯಾನ್ ಹಾಗೂ ಒಬ್ಬ ಅಪ್ರಾಪ್ತನನ್ನು ಬಂಧಿಸಲಾಗಿದೆ. ಈ ಮೂವರು ಸೇರಿ ಸುಮಾರು 12 ಡಿಯೋ ಬೈಕ್ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸರು ಕಳವು ಮಾಡಿದ್ದ ಎಲ್ಲಾ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಬೇಧಿಸಲು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪೂರ್ವ ಪೊಲೀಸ್ ಠಾಣೆಯ PSI ಶೇಷಾದ್ರಿಕುಮಾರ್ ನೇತೃತ್ವದಲ್ಲಿ ಲಿಂಗರಾಜು, ಉಮರ್, ರವಿಕಿರಣ್, ಶಿವಕುಮಾರ್ ಹಾಗೂ ಲೋಕೇಶ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಯಶಸ್ವಿ ಕಾರ್ಯಾಚರಣೆಯ ಮೂಲಕ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಂಡ ತಂಡದ ಕಾರ್ಯವನ್ನು ಎಸ್ಪಿ ಡಾ. ಶೋಭಾರಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಈ ಘಟನೆಯ ಮೂಲಕ ಬೈಕ್ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಮಂಡ್ಯ ಪೂರ್ವ ಪೊಲೀಸರ ಕಾರ್ಯಾಚರಣೆ ಗಮನಾರ್ಹವಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸುವುದು ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




