Saturday, April 19, 2025

Latest Posts

ಮಾದಕ ಕಂಠದ ಸಂಗೀತ ಸಾಧಕಿ ಮಂಜುಳಾ ಗುರುರಾಜ್..!

- Advertisement -

 

ಒಂದುಕಾಲದಲ್ಲಿ ಎಲ್.ಆರ್.ಈಶ್ವರಿ ತಮ್ಮ ಮಾದಕ ಕಂಠಕ್ಕೆ ಜನಪ್ರಿಯರಾಗಿದ್ದರು. ಮುಂದೆ ಕನ್ನಡದಲ್ಲಿ ಅಂತಹ ಸೊಗಡನ್ನು ನೀಡಿದಂತಹ ಗಾಯಕಿ ಮಂಜುಳಾ ಗುರುರಾಜ್. ಅವರು ಇಂತಹ ಗಾಯನಕ್ಕೇ ಸೀಮಿತರಾದವರಲ್ಲ. ಅವರ ಕಂಠಸಿರಿಯಲ್ಲಿನ ವೈವಿಧ್ಯತೆ ಅಪರೂಪದ್ದು. ಇನ್ನೊಂದು ರೀತಿಯಲ್ಲಿ ಕನ್ನಡದಲ್ಲಿ ಪರಭಾಷಾ ಗಾಯಕರ ಪಾರಮ್ಯ ನಡೆಯುತ್ತಿದ್ದಾಗ ಕನ್ನಡದ ಇಂಪನ್ನು ಮೂಡಿಸಿದ ಹೆಗ್ಗಳಿಕೆ ಕೂಡ ಅವರದ್ದೇ.

ಮಂಜುಳಾ ಅವರು ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದದ್ದು ಬೆಂಗಳೂರಿನಲ್ಲಿ. ಅವರದ್ದು ಸಾಂಸ್ಕೃತಿಕ ಕುಟುಂಬ. ತಾಯಿ ಸೀತಾಲಕ್ಷ್ಮಿ ಹಾಡುತ್ತಿದ್ದರು. ತಂದೆ ರಾಮಣ್ಣ ಮೃದಂಗ ವಾದಕರು. ಮೂರನೇ ವಯಸ್ಸಿನಿಂದಲೇ ಮಂಜುಳಾ ಹಾಡಲು ಆರಂಭಿಸಿದ್ದರು. ಆರನೇ ವಯಸ್ಸಿಗೆ ಆಕಾಶವಾಣಿಯ ‘ಬಾಲಜಗತ್’ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದ್ದರು. ಹೀಗಿದ್ದರೂ ಬಾಲ್ಯದಲ್ಲಿ ಅವರು ಗಾಯಕಿಯಾಗುವ ಕನಸನ್ನುಕಂಡವರಲ್ಲ. ವೈದ್ಯೆಯಾಗಬೇಕು ಇಲ್ಲವೆ ಕ್ರೀಡಾಪಟುವಾಗಬೇಕು ಎನ್ನುವುದು ಅವರಿಗೆ ಇದ್ದ ಕನಸು. ತಾವು ಪದವಿ ಓದಿದ ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ‘ನೈಟಿಂಗೇಲ್’ ಬಿರುದು ಪಡೆದಿದ್ದರು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೂಡ ಸಕ್ರಿಯರು.ಮೂರುವರೆ ವರ್ಷ ವಯಸ್ಸಲ್ಲೇ ಬಾಲ ಗಾಯಕಿಯಾಗಿ ‘ಜಾಗೃತಿ’ ಚಿತ್ರಕ್ಕೆ ಹಾಡುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಂಜುಳಾ ಗುರುರಾಜ್‌ ಅವರದ್ದು ಸಂಗೀತಗಾರರ ಮನೆತನ. ತಾಯಿ ಹಾಡುತ್ತಿದ್ದರೆ, ತಂದೆ ಮೃದಂಗ ನುಡಿಸುತ್ತಿದ್ದರು. ವಾದ್ಯವೃಂದದಲ್ಲಿ ಮಂಜುಳಾರಿಗೆ ಅಕ್ಕ ಜತೆಯಾದರೆ, ತಾತ ಮೈಸೂರು ಗುರುಮೂರ್ತಿ ಸಂಗೀತದ ಬಗ್ಗೆ ಗ್ರಂಥ ರಚಿಸಿದ್ದವರು. ಮೆಚ್ಚಿ ಮದುವೆಯಾದ ಗಂಡ ಗುರುರಾಜ್‌ ಗಾಯಕನಾದರೆ, ಮಗಳು ಸಂಗೀತ ಕೂಡ ಉದಯೋನ್ಮುಖ ಗಾಯಕಿ. ಹೀಗೆ ಮಂಜುಳಾ ಗುರುರಾಜ್‌ ಅವರ ಮನೆ- ಮನ ಎಲ್ಲವೂ ಸಂಗೀತಮಯ.

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು..!

ಈ ಹಾಡು ಕೇಳಿದವರು ಗುಂಡು ಹಾಕದೆಯೂ ಮತ್ತಿನಲ್ಲಿ ತೇಲಾಡುವಂತಹ ಕಾಲವೊಂದಿತ್ತು. “ನಂಜುಂಡಿ ಕಲ್ಯಾಣ” ಚಿತ್ರದ ಈ ಹಾಡಿನಿಂದ ಗಾಯಕಿ ಮಂಜುಳಾ ಗುರುರಾಜ್‌ ಮತ್ತು ಆ ಹಾಡಿಗೆ ನಟಿಸಿದ ಮಾಲಾಶ್ರೀ ದಿನಬೆಳಗಾಗುವುದರೊಳಗೆ ಜನಪ್ರಿಯರಾದರು. ಎಲ್‌.ಆರ್‌. ಈಶ್ವರಿ ಬಿಟ್ಟು ಹೋದ ಸ್ಥಾನಕ್ಕೆ ಈಕೆ ವಾರಸುದಾರಳು ಎಂಬ ಅಭಿಪ್ರಾಯವೂ ಆ ದಿನಗಳಲ್ಲಿ ಕೇಳಿಬಂತು. ಗುಂಡು ಹಾಡಿಗೂ ಮುಂಚೆ ಮತ್ತು ನಂತರ ಅನೇಕ ಒಳ್ಳೆಯ ಹಾಡುಗಳನ್ನು ಮಂಜುಳಾ ಹಾಡಿದ್ದಾರೆ. ಆದರೂ, ಈಗಲೂ ಮಂಜುಳಾ ಗುರುರಾಜ್‌ ಎಂದೊಡನೆ ಜನ ನೆನೆಯುವುದು ಗುಂಡು ಹಾಡನ್ನು.

ಮಂಜುಳಾ ಗುರುರಾಜ್‌ ಅಚ್ಚ ಕನ್ನಡದ ಪ್ರತಿಭೆ. ಕನ್ನಡದ ಗಾಯಕಿಯರಿಗೆ ಪರಭಾಷಾ ಗಾಯಕಿಯರ ಮುಂದೆ ಅವಕಾಶ ಬಹಳ ಕಡಿಮೆ ಇದ್ದಾಗ ಒಂದು ಹಾಡಿನಿಂದ ಜನಪ್ರಿಯರಾಗಿ ನಂತರ ತಮ್ಮ ಮಾದಕ ಕಂಠದಿಂದ ಬಹಳ ವರ್ಷಗಳ ಕಾಲ ತಮ್ಮ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡವರು. ಜನಪ್ರಿಯ ಗಾಯಕಿಯಾಗಿದ್ದರೂ ವಾದ್ಯವೃಂದದಲ್ಲಿ ಹಾಡಿ, ತಮ್ಮ ಗಾಯನ ಶಾಲೆಯಲ್ಲಿ ಶಿಕ್ಷಕಿಯಾಗಿ, ವಾರ್ತಾ ವಾಚಕಿಯಾಗಿಯೂ ಹೆಸರು ಮಾಡಿದವರು. ಮಾಲಾಶ್ರೀ ನಾಯಕಿಯಾಗಿ ಉತ್ತುಂಗದಲ್ಲಿರುವಾಗ ಅವರ ಖಾಯಂ ಕಂಠವಾಗಿದ್ದರು ಮಂಜುಳಾ ಗುರುರಾಜ್‌ .

ಬಂದ ಅವಕಾಶಗಳನ್ನ ಯಾವತ್ತಿಗೂ ಬಿಡದ ಈ ಛಲಗಾತಿ, ತನ್ನ 4ನೇ ಸಿನಿಮಾಗೇ ರಜನಿಕಾಂತ್ ಅವರ ಚಿತ್ರದಲ್ಲಿ ಹಾಡಿದರು. ಇದುವರೆಗೂ 25 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿರೋ ಈ ಗಾಯಕಿ, ಒಂದೇ ದಿನಕ್ಕೆ 18 ಹಾಡುಗಳನ್ನ ಹಾಡಿದ ಸಾಧಕಿಯೂ ಹೌದು. ತನ್ನ ಗಾಯನದ ಪ್ರತಿಭೆಯನ್ನ ಗುರುತಿಸಿ ಅವಕಾಶಗಳ ಸುರಿಮಳೆಯನ್ನೇ ಸುರಿಸಿದ ಪಾರ್ವತಮ್ಮ ರಾಜ್‌ಕುಮಾರ್ ಮಂಜುಳಾ ಗುರುರಾಜ್ ಅವರ ಮತ್ತೊಂದು ಶಕ್ತಿ. ಡಾ.ರಾಜ್‌ಕುಮಾರ್ ಅವರ ಜೊತೆಯಲ್ಲೇ 24 ಡ್ಯುಯೆಟ್ ಹಾಡುಗಳನ್ನ ಹಾಡಿರೋ ಹೆಗ್ಗಳಿಕೆ ಇವರಿಗೆ ಸೇರಿದ್ದು. ಇಷ್ಟೇ ಅಲ್ಲ ಇನ್ನೂ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಕನ್ನಡದ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಕರ್ನಾಟಕ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೆ ಈ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.

ನಳಿನಾಕ್ಷಿಕಾರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss