ಗೃಹಲಕ್ಷ್ಮೀ ಲೆಕ್ಕ ‘ಕ್ಲಿಯರ್’ ಇಲ್ಲ

ಇಡೀ ರಾಜ್ಯದ ಮಹಿಳೆಯರು ಕಾದಿರುವ ಗೃಹಲಕ್ಷ್ಮೀ ಯೋಜನೆ — ತಿಂಗಳಿಗೆ ₹2000 ನೀಡುವ ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಈಗ ಹೊಸ ವಿವಾದ ಸಿಡಿಲಿನಂತೆ ಎದ್ದಿದೆ. ಯೋಜನೆಗೆ ಎಷ್ಟು ಕಂತು ಬಿಡುಗಡೆಯಾಗಿದೆ? ಎಷ್ಟು ಫಲಾನುಭವಿಣಿಯರು ಸೇರಿಸಿದ್ದಾರೆ? ಇದರ ಬಗ್ಗೆ ಸಚಿವೆಯರ ಮಾತು, ಇಲಾಖೆಯ ದಾಖಲೆ — ಎರಡೂ ಸರಿಯಾಗಿಲ್ಲ, ಮಾಹಿತಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಸಂಖ್ಯೆಗಳ ಗೊಂದಲವಲ್ಲ… ಸರ್ಕಾರದ ನಂಬಿಕೆಗೂ ಹೊಡೆತ ಕೊಡಬಹುದಾದ ಪ್ರಶ್ನೆ. ಪ್ರತಿ ತಿಂಗಳು ₹2000 — ಅಂದರೆ ಮಹಿಳೆಯರಿಗೊಂದು ಆರ್ಥಿಕ ಬಲದ ಕನಸು. ಆದರೆ… ಈ ಕನಸಿನ ಹಿಂದೆ ಈಗ ಸಂಖ್ಯೆಗಳ ಗೊಂದಲ ಕೇಳಿಬರುತ್ತಿದೆ. ಸಚಿವೆ ಹೆಬ್ಬಾಳ್ಳರ್ ಹಾಗೂ ಅಧಿಕಾರಿಗಳು ನೀಡಿದ ಮಾಹಿತಿ ಒಂದಕ್ಕೊಂದು ಸರಿಹೊಂದದೇ ಇರುವುದರಿಂದಲೇ ಈ ವಿವಾದ ಸೃಷಿಯಾಗಿದೆ.

ಸೋಮವಾರ ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಗೃಹಲಕ್ಷ್ಮೀ ಯೋಜನೆಯ ಎಷ್ಟು ಕಂತು ಇದುವರೆಗೆ ಬಿಡುಗಡೆ ಮಾಡಲಾಗಿದೆ ಎಂಬುದಕ್ಕೂ ಸರಿಯಾದ ಉತ್ತರ ದೊರೆಯುತ್ತಿಲ್ಲ. ಒಂದೊಮ್ಮೆ 23 ಕಂತು ನೀಡಲಾಗಿದೆ ಎನ್ನುತ್ತಾರೆ, ಮತ್ತೊಮ್ಮೆ 25 ಕಂತು ಎಂದು ಹೇಳುತ್ತಾರೆ.

ಇದೇ ರೀತಿ ಫಲಾನುಭವಿಗಳ ಸಂಖ್ಯೆ ಕುರಿತು ಕೂಡ ಗೊಂದಲ. 1.28 ಕೋಟಿ ಫಲಾನುಭವಿಗಳು ಇದ್ದಾರೆ ಅಂತ ಹೇಳ್ತಾರೆ. ಮತ್ತೊಮ್ಮೆ 1.24 ಕೋಟಿ ಅಥವಾ 1.26 ಕೋಟಿ ಎಂದು ಹೇಳುತ್ತಾರೆ ಎಂದು ಟೀಕಿಸಿದರು. ಈ ರೀತಿಯ ಗೊಂದಲಭರಿತ ಉತ್ತರಗಳಿಂದ ಸರ್ಕಾರದ ಕಾರ್ಯಪದ್ದತಿಯ ಮೇಲಿನ ವಿಶ್ವಾಸ ಕುಸಿಯುತ್ತಿದೆ ಎಂದು ಅವರು ಖಂಡಿಸಿದರು.

ವರದಿ : ಲಾವಣ್ಯ ಅನಿಗೋಳ

About The Author