₹12 ಕೋಟಿ ಕಳೆದುಕೊಂಡ ಗೃಹಲಕ್ಷ್ಮೀ ಫಲಾನುಭವಿಗಳು!

ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಳೇಕರ್ ಎಂಬಾತ ಹಲವಾರು ಮಹಿಳೆಯರಿಂದ ಸುಮಾರು 12 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿದ್ದಾನೆ.

ಮಹಿಳೆಯರಿಗೆ ಅಗರಬತ್ತಿ ಪ್ಯಾಕಿಂಗ್ ಕೆಲಸ ಕೊಡಲಾಗುತ್ತದೆ ಎಂದು ನಂಬಿಸಿ, ಬಾಬಾಸಾಹೇಬ್ ಕೋಳೇಕರ್ ಮಹಿಳಾ ಗೃಹ ಉದ್ಯೋಗ ಸಮೂಹ ಬೆಳಗಾವಿ ಎಂಬ ಹೆಸರಿನಲ್ಲಿ ವಂಚನೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳನ್ನು ಟಾರ್ಗೆಟ್ ಮಾಡಿ, ‘ಐಡಿ ಕಾರ್ಡ್’ಗಳ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗಿತ್ತು. ಪ್ರತಿಯೊಂದು ಐಡಿ ಕಾರ್ಡ್‌ಗೆ ₹2,500 ವಸೂಲಿ ಮಾಡುತ್ತಿದ್ದ. ಪ್ರತಿ ಕಾರ್ಡ್‌ಗೆ ₹3,000 ನೀಡುತ್ತೇವೆ ಎಂಬ ಆಮಿಷ ತೋರಿಸಲಾಗಿತ್ತು. ಈ ಆಮಿಷಕ್ಕೆ ನಂಬಿಕೊಂಡ ಅನೇಕ ಮಹಿಳೆಯರು ತಲಾ 20ರಿಂದ 30 ಐಡಿ ಕಾರ್ಡ್‌ಗಳನ್ನು ಖರೀದಿಸಿದ್ದರು.

ಈ ರೀತಿಯಲ್ಲಿ ಸಾವಿರಾರು ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಆರೋಪಿ, ಬಳಿಕ ಹಣದೊಡನೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ವಂಚನೆಗೆ ಒಳಗಾದ ಮಹಿಳೆಯರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ ಅವರಿಗೂ ದೂರು ನೀಡಿದ್ದಾರೆ.

ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವರದಿ : ಲಾವಣ್ಯ ಅನಿಗೋಳ

About The Author