ಚುನಾವಣೆ ತಾಪಮಾನ ಹೆಚ್ಚುತ್ತಿರುವ ಬಿಹಾರದಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ಗ್ಯಾರಂಟಿ ಯೋಜನೆಗಳ ಘೋಷಣೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ ಮಿತ್ರಪಕ್ಷ ಆರ್‌ಜೆಡಿ, ಕರ್ನಾಟಕ ಮಾದರಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2500 ಭತ್ಯೆ ನೀಡುವುದಾಗಿ ಭರವಸೆ ನೀಡಿತ್ತು. ಇದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು–ಬಿಜೆಪಿ ಸರ್ಕಾರವು ಬೃಹತ್ ಗಿಫ್ಟ್ ಘೋಷಿಸಿದೆ. ರಾಜ್ಯದ 75 ಲಕ್ಷ ಮಹಿಳೆಯರಿಗೆ ತಲಾ 10,000 ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು. ಒಟ್ಟು 7500 ಕೋಟಿಯ ಬಜೆಟ್‌ನೊಂದಿಗೆ ಆರಂಭವಾದ ಈ ಯೋಜನೆಯಡಿ, ಪ್ರತಿ ಕುಟುಂಬದ ಒಬ್ಬ ಮಹಿಳೆಯ ಖಾತೆಗೆ ಪ್ರಾರಂಭಿಕವಾಗಿ 10,000 ಜಮಾ ಮಾಡಲಾಗಿದೆ. ನಂತರ ಉದ್ಯಮ ಅಥವಾ ವ್ಯಾಪಾರದಲ್ಲಿ ಯಶಸ್ವಿಯಾದವರಿಗೆ 2 ಲಕ್ಷದವರೆಗೂ ನೆರವು ಲಭ್ಯವಾಗಲಿದೆ. ಮಹಿಳಾ ಮತದಾರರಿಗೆ ಇದು ಪ್ರಮುಖ ಆಕರ್ಷಣೆಯಾಗಿ ಪರಿಣಮಿಸುತ್ತಿದೆ.
ಯೋಜನೆಗೆ ಚಾಲನೆ ನೀಡಿದ ಮೋದಿ, ಬಿಹಾರದಲ್ಲಿ ಮಹಿಳೆಯರು ಇದೀಗ ಹೊಸ ಕಿರಾಣಿ ಅಂಗಡಿ, ಪಾತ್ರೆ, ಸೌಂದರ್ಯವರ್ಧಕ ಅಥವಾ ಸ್ಟೇಷನರಿ ಅಂಗಡಿಗಳನ್ನು ತೆರೆಯಬಹುದು. ಹೈನುಗಾರಿಕೆ, ಕೋಳಿ ಸಾಕಣೆ ಸೇರಿದಂತೆ ವಿವಿಧ ಉದ್ಯಮಗಳಿಗೆ ತರಬೇತಿ ವ್ಯವಸ್ಥೆಯೂ ಇದೆ ಎಂದರು. ಇದೇ ವೇಳೆ ಅವರು ಆರ್‌ಜೆಡಿಯನ್ನು ಮಹಿಳಾ ವಿರೋಧಿ ಎಂದು ಟೀಕಿಸಿ, ಆರ್‌ಜೆಡಿಗೆ ಮತ ನೀಡಬೇಡಿ. ನಿತೀಶ್ ನೇತೃತ್ವದಲ್ಲಿ ಬಿಹಾರದ ಜನತೆ ಸುರಕ್ಷಿತರಾಗಿದ್ದಾರೆ. ಬಿಹಾರ ಮಹಿಳೆಯರಿಗೆ ಈಗ ಇಬ್ಬರು ಸಹೋದರರು, ನಿತೀಶ್ ಮತ್ತು ನಾನು. ಇಬ್ಬರೂ ನಿಮ್ಮ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




