National News: ಮದುವೆಗೆ ಮಾಡಿದ ಭೋಜನದಲ್ಲಿ ಮಾಂಸಾಹಾರ ಮಾಡಲಿಲ್ಲ. ಬರೀ ಸಸ್ಯಾಹಾರವಷ್ಟೇ ಮಾಡಿದ್ದಾರೆಂಬ ಕಾರಣಕ್ಕೆ, ವಧುವಿನ ಮೇಲೆ ಮತ್ತು ವಧುವಿನ ಮನೆಯವರ ಮೇಲೆ ವರನ ಕಡೆಯವರು ಹಲ್ಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಡಿಯೋರಿಯಾದ ಆನಂದ್ ನಗರದಲ್ಲಿ ಈ ಘಟನೆ ನಡೆದಿದ್ದು, ಅಭಿಷೇಕ್ ಶರ್ಮಾ ಎಂಬಾತ ಸುಷ್ಮಾಳನ್ನು ವಿವಾಹವಾಗಬೇಕೆಂದು, ಗುರು ಹಿರಿಯರು ನಿಶ್ಚಯಿಸಿದ್ದರು. ಮದುವೆ ದಿನದ ತನಕ ಎಲ್ಲವೂ ಸರಿ ಇತ್ತು. ಆದರೆ ಮದುವೆ ದಿನ, ಮೆನುವಿನಲ್ಲಿ ಮಾಂಸಾಹಾರ ಮಾಡಲಿಲ್ಲವೆಂಬ ಕಾರಣಕ್ಕೆ, ಜಗಳ ಶುರು ಮಾಡಿದ್ದಾರೆ.
ಮೊದಲು ಮೀನಿನ ಖಾದ್ಯಕ್ಕೆ ಡಿಮ್ಯಾಂಡ್ ಮಾಡಿದ್ದ ವರನ ಕಡೆಯವರು, ಬಳಿ ಬೇರೆ ಬೇರೆ ಮಾಂಸ ಖಾದ್ಯಗಳಿಗೆ ಬೇಡಿಕೆ ಇಟ್ಟಿದ್ದಾರೆ. ಮಾಡಿಕೊಡಲಾಗದ ಹಿನ್ನೆಲೆ, ಜಗಳ ಮಾಡಿ, ವಧುವಿನ ಕಡೆಯವರ ಮೇಲೆ ಮತ್ತು ವಧುವಿನ ಮೇಲೆ ಹಲ್ಲೆ ಮಾಡಲಾಗಿದ್ದು, 6 ಜನರಿಗೆ ಗಾಯವಾಗಿದೆ.
ವರ ಸೇರಿ ಕೆಲವರು ಊಟದ ಮಧ್ಯವೇ ಎದ್ದು ಹೋಗಿದ್ದು, ಮದುವೆ ಮುರಿದು ಬಿದ್ದಿದೆ. ಇನ್ನು ವಧುವಿನ ಕಡೆಯವರು ವರನ ಕಡೆಯವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರ ಸೇರಿ ಕೆಲವರನ್ನು ಅರೆಸ್ಟ್ ಮಾಡಲಾಗಿದೆ.