GST ಇಳಿಕೆ – ರಾಜ್ಯಕ್ಕೆ ನಷ್ಟವೆಷ್ಟು ಗೊತ್ತಾ?

ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಕೆ ಮೂಲಕ, ದೇಶದ ಜನರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. ಆದರೆ, ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಜಿಎಸ್‌ಟಿ ಹೊಡೆತದ ಆತಂಕ ಎದುರಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ದರ ಸರಳೀಕರಣ ವ್ಯವಸ್ಥೆ ಪ್ರಸ್ತಾವನೆಯಿಂದ, ರಾಜ್ಯಕ್ಕೆ ವಾರ್ಷಿಕ 15,000 ಕೋಟಿ ರೂ. ನಷ್ಟವಾಗಲಿದೆ. ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದ ಆದಾಯದಲ್ಲಿ ವಾರ್ಷಿಕ ಸರಾಸರಿ 70 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಒಟ್ಟಾರೆ 85,000 ಕೋಟಿ ರೂ. ವಾರ್ಷಿಕ ಆದಾಯ ನಷ್ಟವನ್ನು ಎದುರಾಗಿದೆ.

ಹೊಸ ಯೋಜನೆಯಡಿಯಲ್ಲಿ ಪ್ರತಿ ರಾಜ್ಯವು ಎಷ್ಟು ಆದಾಯ ಕಳೆದುಕೊಳ್ಳಲಿದೆ ಎಂಬುದನ್ನು ವಿವರಿಸಲು, ಕೇಂದ್ರವು ಯಾವುದೇ ಅಂದಾಜು ಅಥವಾ ಮಾರ್ಗಸೂಚಿಯನ್ನು ಒದಗಿಸಿಲ್ಲ. ಜಿಎಸ್‌ಟಿ ಇಳಿಕೆ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಅಂತಾ ಭರವಸೆ ನೀಡಿದ್ದರು. ಆದರೆ, ವರ್ಷದಿಂದ ವರ್ಷಕ್ಕೆ ರಾಜ್ಯದ ಆದಾಯವನ್ನು ಕುಗ್ಗಿಸಿದೆ.

ಕಳೆದ 7-8 ವರ್ಷಗಳ ಅನುಭವದಲ್ಲಿ ಈ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಪ್ರತಿ ವರ್ಷವೂ ಎಲ್ಲಾ ರಾಜ್ಯಗಳ ನಿವ್ವಳ ಆದಾಯ ಗಣನೀಯವಾಗಿ ಇಳಿಯುತ್ತಲೇ ಇದೆ. ವ್ಯಾಟ್ ಅಡಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದ ಕಾಲದಲ್ಲಿ, ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇಕಡ 6.1ರಷ್ಟು ಇತ್ತು. ಆದ್ರೀಗ ಜಿಎಸ್‌ಟಿ ಜಾರಿಯಾದ ಬಳಿಕ ಈ ಪ್ರಮಾಣ ಈವರೆಗೆ, ಶೇಕಡ 6.1ಕ್ಕೂ ತಲುಪಲಾಗಿಲ್ಲ. ಪ್ರಸ್ತುತ ಜಿಡಿಪಿಗೆ ಜಿಎಸ್‌ಟಿ ಕೊಡುಗೆ ಕೇವಲ ಶೇಕಡ 5.8ರಷ್ಟು ಮಾತ್ರ ಇದೆ. ಒಟ್ಟಾರೆ ಜಿಎಸ್‌ಟಿಯಿಂದಾಗಿ ರಾಜ್ಯ ಹಾಗೂ ಕೇಂದ್ರಕ್ಕೆ ಆದಾಯ ನಷ್ಟವಾಗುತ್ತಿರುವುದು ಸ್ಪಷ್ಟವಾಗಿದೆ.

ಜಿಎಸ್‌ಟಿ ಜಾರಿಗೊಂಡ ನಂತರ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲು, 2016-17ರಿಂದ 2024-25ಕ್ಕೆ ಹೋಲಿಸಿದರೆ ವಾರ್ಷಿಕ 21,977 ಕೋಟಿ ರೂ. ಕಡಿತವಾಗಿದೆ. ಕೇಂದ್ರದ ಪುರಸ್ಕೃತ ಯೋಜನೆಯಲ್ಲಿ ಕರ್ನಾಟಕಕ್ಕೆ ಬರುವ ಅನುದಾನ ವಾರ್ಷಿಕ 18,870 ಕೋಟಿ ರೂ. ಕಡಿತಗೊಂಡಿದೆ. ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು 2.50 ಲಕ್ಷ ಕೋಟಿ ರೂ.ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ.

ಕೇಂದ್ರದ ಆದಾಯದಲ್ಲಿ ಜಿಎಸ್‌ಟಿ ಪಾಲು ಕೇವಲ ಶೇಕಡ 28ರಷ್ಟು ಮಾತ್ರ ಇದೆ. ಉಳಿದ ಶೇಕಡ 72ರಷ್ಟು ಆದಾಯವನ್ನು, ಕೇಂದ್ರ ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್, ಡೆವಿಡೆಂಟ್ ಹಾಗೂ ವಿವಿಧ ಸೆಸ್‌ಗಳೇ ಕೇಂದ್ರ ಸರ್ಕಾರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇಕಡ 17ರಿಂದ ಶೇಕಡ 20ರಷ್ಟು ಆದಾಯ ಗಳಿಸುತ್ತದೆ. ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಸಹ ಕೇಂದ್ರ ಸರ್ಕಾರ, ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್‌ಟಿ ಪಾಲು ಶೇಕಡ 50ರಷ್ಟು ಇದೆ. ಹೀಗಾಗಿ ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್‌ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದ ಶೇಕಡ 20ರಷ್ಟು ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಪ್ರಶ್ನಾರ್ಥಕವಾಗುತ್ತದೆ.

ಇನ್ನು, ಹೊಸ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಜಿಎಎಸ್‌ಟಿ ಕೌನ್ಸಿಲ್ ಪರಿಹಾರ ನೀಡಬೇಕು. ರಾಜ್ಯಗಳಿಗೆ ಹೆಚ್ಚಿನ ನಷ್ಟವಾದರೆ ಅಂತಿಮವಾಗಿ ಜನ‌ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯಗಳ ಸ್ವಾಯತ್ತತೆ ತುಂಬಾ ಮುಖ್ಯವಾದ ವಿಚಾರ. ಪ್ರತಿಯೊಂದು ರಾಜ್ಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸುಸ್ಥಿರ ಆದಾಯ ಅತ್ಯಂತ ಮುಖ್ಯ. ಆದರೆ, ಆದಾಯ ಕೊರತೆ ಉಂಟಾಗಿ ಸ್ವಂತ ಸರ್ಕಾರ ನಡೆಸಲು ಕೇಂದ್ರದ ಕಡೆ ಕೈಚಾಚುವಂತಾದರೆ, ರಾಜ್ಯಗಳ ಸ್ವಾಯತ್ತೆ ಎಂಬ ಪದ ಅರ್ಥ ಕಳೆದುಕೊಳ್ಳುತ್ತದೆ. ಹೀಗಂತ ಕೇಂದ್ರದ ನಿರ್ಧಾರಕ್ಕೆ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author