ಗ್ಯಾರಂಟಿಗಳಿಗೆ ಸಾವಿಲ್ಲ, ಅಭಿವೃದ್ಧಿಗೂ ಸಾವಿಲ್ಲ. ಆದರೆ ಟೀಕೆಗಳಿಗೆ, ಆರೋಪಕ್ಕೆ, ಅಪಪ್ರಚಾರಕ್ಕೆ ಸಾವಿದೆ: ಡಿ.ಕೆ.ಶಿವಕುಮಾರ್

Political News: ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಬಂದು 1 ಸಾವಿರ ದಿನಗಳು ಕಳೆದಿದ್ದು, 1000 ದಿನಗಳನ್ನು ಪೂರೈಸಿರುವ ಹಿನ್ನೆಲೆ ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನಡೆಯಿತು.

ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಂದಾಯ ಸಚಿವರಾದ ಶ್ರೀ ಕೃಷ್ಣಭೈರೇಗೌಡರಿಗೆ ರಾಜ್ಯದ ಎಲ್ಲಾ ಭೂಮಾಲೀಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸರ್ಕಾರದ 1000 ದಿನಗಳ ಸಾಧನೆ, ರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನುಡಿದಂತೆ ನಡೆದು ನಿಮ್ಮ ಆಶೀರ್ವಾದ ಪಡೆಯಲಿಕ್ಕೆ ಇಲ್ಲಿಗೆ ನಾವು ಬಂದಿದ್ದೇವೆ ಎಂದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಅಂತ ಹೇಳಿದ್ದೆ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದಿದ್ದಕ್ಕೆ 5 ಗ್ಯಾರಂಟಿಗಳ ಜೊತೆಗೆ ಇದೀಗ 6ನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿಯನ್ನು ನೀಡುತ್ತಿದ್ದೇವೆ. . ರಾಜ್ಯದಲ್ಲಿರುವ ಎಲ್ಲಾ ಭೂ ಮಾಲೀಕರಿಗೆ ನಮ್ಮ ಸರ್ಕಾರ ಪೋಡಿ, ಪಟ್ಟಾ ಹಾಗೂ ಆಸ್ತಿ ದಾಖಲೆಗಳನ್ನು ನೀಡಿದೆ. 5 ಗ್ಯಾರಂಟಿಗಳನ್ನು ಎಲ್ಲಾ ಪಕ್ಷದವರು ಕಾಪಿ ಮಾಡಿದ್ದಕ್ಕೆ, ಇದು ಈ ದೇಶದ ಗ್ಯಾರಂಟಿಯಾಗಿ ಉಳಿದಿದೆ. ಗ್ಯಾರಂಟಿಗಳಿಗೆ ಸಾವಿಲ್ಲ, ಅಭಿವೃದ್ಧಿಗೂ ಸಾವಿಲ್ಲ. ಆದರೆ ಟೀಕೆಗಳಿಗೆ ಸಾವಿದೆ. ಆರೋಪಕ್ಕೆ ಸಾವಿದೆ. ಅಪಪ್ರಚಾರಕ್ಕೆ ಸಾವಿದೆ. ಕೃಷ್ಣಭೈರೇಗೌಡರು ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜನರ ಋಣವನ್ನು ತೀರಿಸಬೇಕೆಂದು ನಿರ್ಧರಿಸಿದರು ಎಂದು ಡಿಕೆಶಿ ಹೇಳಿದ್ದಾರೆ.

ದೇವರು ಕೊಟ್ಟ ಅವಕಾಶದಲ್ಲಿ ನಿಮಗೆ ಭೂಮಿ ಗ್ಯಾರಂಟಿ ಕೊಟ್ಟು ನಿಮ್ಮ ಬದುಕಿನಲ್ಲಿ ಹೊಸ ಧೈರ್ಯವನ್ನು ತುಂಬುತ್ತಿದ್ದೇವೆ. ಪಂಚ ಗ್ಯಾರಂಟಿಗಳಿಂದ ಜನರು ನೆಮ್ಮದಿಯಾಗಿ ಬದುಕುತ್ತಿದ್ದಾರೆ. ವಿಪಕ್ಷದವರು ಭಾವನೆಗಳ ಮೇಲೆ ರಾಜಕೀಯ ಮಾಡಿದರೆ, ನಾವು ಬದುಕಿನ ಮೇಲೆ ರಾಜಕೀಯ ಮಾಡ್ತಿದ್ದೀವಿ. ಜನರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದೆ. ಗ್ಯಾರಂಟಿಗಳಿಗೂ ಸಾವಿಲ್ಲ, ಅಭಿವೃದ್ಧಿಗೂ ಸಾವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

About The Author