ಬೆಂಗಳೂರು: ದೇವದತ್ ಪಡಿಕಲ್ (62 ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ 9 ವಿಕೆಟ್‍ಗಳ ಜಯ ದಾಖಲಿಸಿತು. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಶುಕ್ರವಾರ ಮೈಸೂರಿನ ಶ್ರೀಕಂಠದತ್ತ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ತಂಡ ಫಿಲ್ಡಿಂಗ್ ಆಯ್ದುಕೊಂಡಿತು. ಹುಬ್ಬಳ್ಳಿ ಪರ ಆರಂಭಿಕರಾಗಿ ಕಣಕ್ಕಿಳಿದ ಲುವಿನಿತ್ ಸಿಸೋಡಿಯಾ (30), ಮೊಹ್ಮದ್ ತಾಹಾ (15) ಮೊದಲ ವಿಕೆಟ್‍ಗೆ 32 ರನ್ ಸೇರಿಸಿದರು. ನಂತರ ದಾಳಿಗಿಳಿದ ರಿತೇಶ್ ಭಟ್ಕಳ್ ಶಿವಕುಮಾರ್ 8, ಸ್ವಪ್ನಿಲ್ ಯೆಲ್ವೆ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು.
ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ತುಷಾರ್ ಸಿಂಗ್ 42, ಜ್ಞಾನೇಶ್ವರ್ ನವೀನ್ 24 ರನ್ ಗಳಿಸಿದರು. ಅಭಿಮನ್ಯ ಮಿಥುನ್ 5, ರೋಹನ್ ನವೀನ್ ಅಜೇಯ 6, ಫಾರೂಕ್ 1, ಕೌಶಿಕ್ ಅಜೇಯ 2ರನ್ ಗಳಿಸಿದರು. ಹುಬ್ಬಳ್ಳಿ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.
146 ರನ್‍ಗಳ ಸವಾಲನ್ನು ಬೆನ್ನತ್ತಿದ ಗುಲ್ಬರ್ಗಾ ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕಲ್ (62), ಹಾಗೂ ರೋಹನ್ ಪಾಟೀಲ್ (61) ಮೊದಲ ವಿಕೆಟ್‍ಗೆ 91 ರನ್ ಗಳ ಉತ್ತಮ ಆರಂಭ ನೀಡಿದರು. ರೋಹನ್ ಪಾಟೀಲ್ ಅಜೇಯ 61 ರನ್ ಗಳಿಸಿದರೆ ಜೆಸ್ವತ್ ಆಚರ್ಯ ಅಜೇಯ 17 ರನ್ ಗಳಿಸಿದರು. ಗುಲ್ಬರ್ಗಾ ತಂಡ 16.4 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ದೇವದತ್ ಪಡಿಕಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.