Political News: ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ (ಮನರೇಗಾ/ನರೇಗಾ) ಬದಲಿಗೆ ವಿಕಸಿತ ಭಾರತ – ಜೆ ರಾಮ್ ಜಿ ಮಸೂದೆಯನ್ನು ಪ್ರಸ್ತಾಪಿಸಿರುವುದು ಗ್ರಾಮೀಣ ಕಾರ್ಮಿಕರ ಸಾರ್ವತ್ರಿಕ ಕೆಲಸದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಅಂದರೆ, ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿದ್ದ ‘ನರೇಗಾ’ ಯೋಜನೆಯನ್ನು ದೇಶಾದ್ಯಂತ ಬುಡಮೇಲು ಮಾಡುವುದು, ಆ ಯೋಜನೆಯನ್ನೇ ರದ್ದುಪಡಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂಬುದು ಸ್ಪಷ್ಟವಾಗಿದೆ. ಅತಿ ಶ್ರೀಮಂತರಿಗೆ ತೆರಿಗೆ ವಿನಾಯಿತಿ, ಬಡವರು- ದೀನರು- ಭೂಹೀನರ-ಮಹಿಳೆಯರ ಅನ್ನದ ದಾರಿಯಾಗಿದ್ದ ಸರ್ಕಾರದ ಕಡ್ಡಾಯ ಉದ್ಯೋಗ ಖಾತರಿ ಯೋಜನೆಯನ್ನು ಕೊನೆಗಾಣಿಸುತ್ತಿರುವುದು ಇವರ ಅಭಿವೃದ್ಧಿ ಮಾದರಿ???!! ಇದು ಅಕ್ಷಮ್ಯ ಎಂದು ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಅಂದು ಗಾಂಧಿಯನ್ನು ಗುಂಡಿಕ್ಕಿ ಕೊಂದವರ ಹಿನ್ನೆಲೆಯುಳ್ಳವರು, ಇಂದು ಅವರ ಕನಸಿನ ಯೋಜನೆಗಳನ್ನೂ ಹೊಸಕಿ ಹಾಕಲು ನಿಂತಿದ್ದಾರೆ. ಕಡುಬಡವರ ಹೊಟ್ಟೆಗೆ ಹೊಡೆಯುವುದೇ ಮೋದಿಯವರ ‘ಅಚ್ಚೇ ದಿನವಾ’!!!!??? ಎಂದು ಆರೋಗ್ಯ ಸಚಿವರು ಪ್ರಶ್ನಿಸಿದ್ದಾರೆ.
ಗಾಂಧಿ ವಿರೋಧಿಗಳ ಇಂತಹ ಆಘಾತಕಾರಿ ನಡೆಯನ್ನು ನಾವು ಒಪ್ಪವುದೂ ಇಲ್ಲ, ಈ ದೇಶದ ಬಡಜನರ – ಕಾರ್ಮಿಕರ ಹಕ್ಕಿನ ಯೋಜನೆಯನ್ನು ಹೊಸಕಿ ಹಾಕಲು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ಈ ಮೂಲಕ ನೀಡುತ್ತಿದ್ದೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.




