ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ಶತಸಿದ್ಧ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪ್ಪ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1980ರಿಂದಲೂ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ನಾಯಕರಾಗಿ ಕೆಲಸ ಮಾಡುತ್ತಿದ್ದು, ಅಂದಿನ ವಿದ್ಯಾರ್ಥಿ ನಾಯಕರ ತಂಡದಲ್ಲೇ ಡಿ.ಕೆ. ಶಿವಕುಮಾರ್ ಇದ್ದರು. ಬಿ.ಕೆ. ಹರಿಪ್ರಸಾದ್ ಅವರು ನಮ್ಮ ನಾಯಕರಾಗಿದ್ದರು. ಅಂದು ಪಕ್ಷಕ್ಕಾಗಿ ದುಡಿದ ವಿದ್ಯಾರ್ಥಿ ನಾಯಕರ ತಂಡವೇ ಇಂದು ರಾಜ್ಯದಾದ್ಯಂತ ಅಧಿಕಾರದ ಜವಾಬ್ದಾರಿ ವಹಿಸಿಕೊಂಡಿದೆ ಎಂದು ಅವರು ಹೇಳಿದರು.
ಪದ್ಮನಾಭನಗರ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಹಲವು ಹೋರಾಟಗಳನ್ನು ನಡೆಸಿದ್ದೇವೆ. ಕ್ಷೇತ್ರದಲ್ಲಿನ ಕೆರೆಗಳ ಸಂರಕ್ಷಣೆ ಸೇರಿದಂತೆ ಹಲವು ವಿಚಾರಗಳ ಕುರಿತು ದೊಡ್ಡ ಮಟ್ಟದ ಹೋರಾಟ ನಡೆಸಲಾಗಿತ್ತು. ಈ ಹೋರಾಟಗಳಲ್ಲಿ ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು ಎಂದು ಗುರುಪ್ಪ ನಾಯ್ಡು ತಿಳಿಸಿದರು.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಕೆಲವರು ವೀರಾವೇಶದಿಂದ ಮಾತನಾಡಿದ್ದರು. ಆದರೆ ಅವರ ಬಗ್ಗೆ ಆರಂಭದಿಂದಲೂ ನನಗೆ ಅನುಮಾನವಿತ್ತು. ಅಂದು ಅಶೋಕ್ ಅವರು ಪದ್ಮನಾಭನಗರ ಪರಿಶುದ್ಧವಾಗಿದೆ, ಕೆರೆಗಳ್ಳರು ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಹೇಳಿದ್ದರು. ಇದೀಗ ಅದೇ ನಾಯಕರು ಮತ್ತೆ ಬಿಜೆಪಿಗೆ ಮರಳಿದ್ದಾರೆ ಎಂದು ಅವರು ಆರೋಪಿಸಿದರು.
ನಾನು ಎಂದಿಗೂ ಅವರೊಂದಿಗೆ ವೇದಿಕೆ ಹಂಚಿಕೊಂಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಮೋಸವಾಗಿದೆ. ಕಾಂಗ್ರೆಸ್ ಪಕ್ಷದ ಪದ್ಮನಾಭನಗರ ಘಟಕ ಕಳಂಕ ರಹಿತವಾಗಿದ್ದು, ಈ ವಿಚಾರವಾಗಿ ಅಶೋಕ್ ಅವರು ಸ್ಪಷ್ಟನೆ ನೀಡಬೇಕು ಎಂದು ಗುರುಪ್ಪ ನಾಯ್ಡು ಒತ್ತಾಯಿಸಿದರು.
ಪದ್ಮನಾಭನಗರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
