ಬೆಂಗಳೂರು ಸೇರಿ ಹಲವೆಡೆ ವರುಣನ ಅಬ್ಬರ ಮುಂದಿನ 6 ದಿನ ಮಳೆ ಸಾಧ್ಯತೆ

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ವರುಣ ಅಬ್ಬರಿಸಿದ್ದು, ನಗರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ದಕ್ಷಿಣ ಬೆಂಗಳೂರಿನ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.

ಜಯನಗರ, ಪದ್ಮನಾಭನಗರ, ಜೆ.ಪಿ. ನಗರ, ಎಡೆಯೂರು ಹಾಗೂ ಬಸವನಗುಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ಕೆಲವೆಡೆ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಯಿತು.

ದಾವಣಗೆರೆಯಲ್ಲೂ ವರುಣನ ಅಬ್ಬರ

ದಾವಣಗೆರೆಯಲ್ಲೂ ಬುಧವಾರ ಸಂಜೆ ಭರ್ಜರಿ ಮಳೆಯಾಗಿದೆ. ಗಾಳಿ ಸಹಿತ ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ಬಿರುಗಾಳಿ ಮಳೆಯ ಪರಿಣಾಮ ಕೆಲಕಾಲ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿದೆ.

ಮುಂದಿನ 6 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

ಈ ನಡುವೆ ಕರ್ನಾಟಕದಲ್ಲಿ ಮುಂದಿನ ಆರು ದಿನಗಳ ಕಾಲ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಜೋರಾದ ಗಾಳಿಯೊಂದಿಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಒಳನಾಡು ಜಿಲ್ಲೆಗಳಲ್ಲಿ ಬಹುತೇಕ ಬಿಸಿಲಿನ ವಾತಾವರಣ ಇರಲಿದ್ದು, ಕೆಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಬ್ರಹ್ಮಾವರದಲ್ಲಿ 107.5 ಮಿ.ಮೀ. ಮಳೆ

ಆಗಸ್ಟ್ 18ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲುವಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 107.5 ಮಿ.ಮೀ. ಮಳೆ ದಾಖಲಾಗಿದೆ.

ಇನ್ನು ಪುತ್ತೂರು ತಾಲೂಕಿನ ಬೆಳಂದೂರಿನಲ್ಲಿ 89.5 ಮಿ.ಮೀ., ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರವಾಡದಲ್ಲಿ 63.5 ಮಿ.ಮೀ., ತೀರ್ಥಹಳ್ಳಿಯ ಆಗುಂಬೆಯಲ್ಲಿ 53 ಮಿ.ಮೀ., ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಲೆಯಲ್ಲಿ 43 ಮಿ.ಮೀ., ಮಡಿಕೇರಿಯ ಚೆಂಬುವಿನಲ್ಲಿ 39 ಮಿ.ಮೀ. ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 37 ಮಿ.ಮೀ. ಮಳೆಯಾಗಿದೆ.

ಮುಂದಿನ ದಿನಗಳಲ್ಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿರುವುದರಿಂದ, ಸಾರ್ವಜನಿಕರು ಸ್ಥಳೀಯ ಹವಾಮಾನ ಮುನ್ಸೂಚನೆಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.

About The Author