Tuesday, October 14, 2025

Latest Posts

ತೆರೆಯಿತು ಹಾಸನಾಂಬೆ ಬಾಗಿಲು ಮುಗಿಬಿದ್ದ ಮಹಾ ಜನಪ್ರವಾಹ!

- Advertisement -

ವರ್ಷದಲ್ಲಿ ಕೇವಲ ಒಂದೇ ಬಾರಿಗೆ ಭಕ್ತರಿಗೆ ದರ್ಶನ ನೀಡುವ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ಗುರುವಾರ ಸಂಪ್ರದಾಯಬದ್ಧ ರೀತಿಯಲ್ಲಿ ತೆರೆಯಲಾಯಿತು. ಅರಸು ವಂಶಸ್ಥ ನಂಜರಾಜೇ ಅರಸ್ ಗೊನೆಯುಳ್ಳ ಬಾಳೆ ಗಿಡ ಕಡಿದ ಬಳಿಕ ದೇವಾಲಯದ ಬಾಗಿಲನ್ನು ತೆರೆಯಲಾಯಿತು. ಕ್ಷಾಂತರ ಭಕ್ತರು ದರ್ಶನದ ನಿರೀಕ್ಷೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಹಾಸನದತ್ತ ಹರಿದುಬರುತ್ತಿದ್ದಾರೆ.

ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಈ ಪವಿತ್ರ ಕ್ಷಣದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಹಾಸನ ಶಾಸಕ H.P. ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಅವರು ಸ್ವಾಮೀಜಿಗಳೊಂದಿಗೆ ದೇವಾಲಯಕ್ಕೆ ಆಗಮಿಸಿ, ಉತ್ಸವದ ಉದ್ಘಾಟನೆಯಲ್ಲಿ ಸಹಭಾಗಿತ್ವ ವಹಿಸಿದರು. ಹಾಸನಾಂಬೆ ದೇವಸ್ಥಾನವು 12ನೇ ಶತಮಾನದಿಂದಲೂ ತನ್ನ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ದರ್ಶನವು ಭಕ್ತರಿಗೆ ಮನಸ್ಸಿನ ಶಾಂತಿ ನೀಡುತ್ತದೆ ಎಂಬ ನಂಬಿಕೆಯಿದೆ. ಇಂದಿನಿಂದ 15 ದಿನಗಳ‌ಕಾಲ ದರ್ಶನೋತ್ಸವ ನಡೆಯಲಿದೆ. ಸಾರ್ವಜನಿಕರಿಗೆ ಅಕ್ಟೋಬರ್ 9 ರಿಂದ 23ರ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಕೊನೆಯ ಮೂರು ದಿನಗಳನ್ನು ಹೊರತುಪಡಿಸಿ, ಒಟ್ಟು 13 ದಿನಗಳ ಕಾಲ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ದರ್ಶನ ಅಕ್ಟೋಬರ್ 10 ಬೆಳಿಗ್ಗೆ 6 ಗಂಟೆಯಿಂದಲೇ ಆರಂಭವಾಗುತ್ತದೆ. ಪ್ರತಿದಿನ ಬೆಳಿಗ್ಗೆ 6ಕ್ಕೆ ಆರಂಭವಾಗಲಿದ್ದು ಸಂಜೆ 9.30ಕ್ಕೆ ಮುಚ್ಚುತ್ತದೆ. ಭಕ್ತರಿಗೆ ಉಚಿತ ಊಟ, ನೀರು ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ದೇವಾಲಯ ಸುತ್ತಮುತ್ತಲು ಭದ್ರತೆಯನ್ನು ಬಲಪಡಿಸಲಾಗಿದ್ದು, ಎಲ್ಲದಕ್ಕು ಸೌಲಭ್ಯ ನೀಡಲಾಗಿದೆ. ಕಳೆದ ವರ್ಷಗಳಂತೆ ಈ ಬಾರಿಯೂ 10 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುವ ಸಾಧ್ಯತೆ ಇದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss