ಹೊಯ್ಸಳ ಉತ್ಸವಕ್ಕೆ ಹಾಸನ ಜನರ ಆಗ್ರಹ

ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಉತ್ಸವದ ಕೂಗು ಜೋರಾಗಿದೆ. ವಿಶ್ವವಿಖ್ಯಾತ ಹಂಪಿ ಉತ್ಸವ , ಚಿತ್ರದುರ್ಗದಲ್ಲಿ ಕರುನಾಡ ಉತ್ಸವ ಸೇರಿದಂತೆ, ಹಲವು ಜಿಲ್ಲೆಗಳಲ್ಲಿ ಉತ್ಸವಗಳು ನಡೀತಿವೆ. ಆದರೆ, ಕಳೆದ 8 ವರ್ಷಗಳಿಂದ ಹೊಯ್ಸಳ ಉತ್ಸವ ಮಾಡದೇ, ಹಾಸನ ಜಿಲ್ಲಾಡಳಿತ, ಸರ್ಕಾರ ಬೇಲೂರಿನಲ್ಲಿ ನಿರ್ಲಕ್ಷ್ಯ ವಹಿಸಿದೆ.

ಶಿಲ್ಪಕಲೆಗಳ ತವರೂರು ಬೇಲೂರು, ಹಳೇಬೀಡು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡ ಸಂಭ್ರಮದಲ್ಲಿಯಾದ್ರೂ, ಹೊಯ್ಸಳ ಮಹೋತ್ಸವ ಆಚರಣೆಗೆ ಮುಂದಾಗಬೇಕಿತ್ತು. ಆದರೆ, ಕೆಲವು ಜಿಲ್ಲೆಗಷ್ಟೇ ಉತ್ಸವಗಳನ್ನು ಸೀಮಿತಗೊಳಿಸಿ, ಹಾಸನ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ ಅಂತಾ, ಇತಿಹಾಸ ತಜ್ಞರು, ಸಾಹಿತಿಗಳು, ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಸಮಾವೇಶಗಳ ಹೆಸರಿನಲ್ಲಿ ದುಂದುವೆಚ್ಚ ಮಾಡಲು ಸಾಧ್ಯವಾಗುತ್ತದೆ ಎನ್ನುವುದಾದರೆ, ನಾಡಿನ ಶಿಲ್ಪಕಲೆ, ಸಂಸ್ಕೃತಿಯ ಪ್ರತೀಕವಾದ ಹೊಯ್ಸಳರ ಕೊಡುಗೆ ಸ್ಮರಿಸುವ, ಹೊಯ್ಸಳ ಮಹೋತ್ಸವ ಕೈಬಿಟ್ಟಿರುವ ಉದ್ದೇಶವಾದರೂ ಏನು?. ಈ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರಿಸಬೇಕು.

ಹೊಯ್ಸಳ ಮಹೋತ್ಸವವನ್ನು ಹಲವು ದಶಕಗಳಿಂದ ಆಚರಿಸಿಕೊಂಡು ಬರಲಾಗಿದೆ. ಆರಂಭದಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿತ್ತು. 2015-16ರಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಚ್‌.ಸಿ.ಮಹದೇವಪ್ಪ ನೇತೃತ್ವದಲ್ಲಿ 1 ಬಾರಿ, ಬಳಿಕ ಎ. ಮಂಜು ಉಸ್ತುವಾರಿ ಸಚಿವರಾದ ನಂತರ 2016-17ರಲ್ಲಿ 1 ಬಾರಿ ಆಚರಿಸಿದ್ದು ಬಿಟ್ಟರೆ ಮತ್ತೆ ಆಚರಣೆಯೇ ಆಗಿಲ್ಲ.

ಎಲ್ಲಾ ಶಾಸಕರು, ಸಂಸದರು ಪಕ್ಷಾತೀತವಾಗಿ ಒಗ್ಗಟ್ಟಾಗಿ, ಹೊಯ್ಸಳ ಮಹೋತ್ಸವ ಆಚರಣೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಅನ್ನೋ ಆಗ್ರಹಗಳು ಕೇಳಿ ಬರ್ತಿವೆ.

About The Author