Haveri News: ಜಿಲ್ಲಾ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಕಣ್ಣೀರು

Haveri News: ಹಾವೇರಿ: ಅರಣ್ಯ ಇಲಾಖೆಯ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ವಿಧಾನಸಭೆಯ ಉಪಸಭಾಧ್ಯಕ್ಷರಾದ ಶಾಸಕ ರುದ್ರಪ್ಪ ಲಮಾಣಿ ಸಭೆಯಲ್ಲೇ ಕಣ್ಣೀರಿಟ್ಟ ಘಟನೆ ಹಾವೇರಿಯಲ್ಲಿ ನಡೆದಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಭಾವುಕ ಸನ್ನಿವೇಶ ಕಂಡುಬಂತು. ಹಳೆಯ ಕಾಯ್ದೆಗಳನ್ನು ಮುಂದಿಟ್ಟುಕೊಂಡು ಅರಣ್ಯ ಇಲಾಖೆಯು ರೈತರ ಮತ್ತು ಸಾಮಾನ್ಯ ಜನರ ಜಾಗವನ್ನು ತೆರವುಗೊಳಿಸಲು ಮುಂದಾಗುತ್ತಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ರುದ್ರಪ್ಪ ಲಮಾಣಿ ಅವರು, 1850ರ ಹಳೆಯ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ನೆಪ ಹೇಳಿ ನನ್ನ ಸ್ವಂತ ತೋಟ ಸೇರಿದಂತೆ ಅನೇಕ ಜನರ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅಳಲು ತೋಡಿಕೊಂಡರು.

“ನಮ್ಮ ಅಜ್ಜನ ಕಾಲದಿಂದಲೂ ನಾವು ವಾಸಿಸುತ್ತಿರುವ ಮತ್ತು ನಂಬಿಕೊಂಡಿರುವ ಜಾಗವನ್ನು ಈಗ ಅರಣ್ಯ ಭೂಮಿ ಎಂದು ಹೇಳಿ ತೆರವು ಮಾಡುವುದು ಎಷ್ಟು ಸರಿ? ಜಿಲ್ಲೆಯಲ್ಲಿ ಜನರು ಬದುಕಲು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಪ್ರಶ್ನೆ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಹೀಗಾದರೆ ನಾವು ಎಲ್ಲಿಗೆ ಹೋಗಬೇಕು? ನಾವೆಲ್ಲ ಊರು ಬಿಟ್ಟು ಹೋಗುತ್ತೇವೆ, ನೀವೇ ಇಲ್ಲಿ ಬದುಕಿ” ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಕೂಡ ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿ, ಸಾರ್ವಜನಿಕರ ಕೆಲಸಗಳಿಗೆ ಅಡ್ಡಿಪಡಿಸದಂತೆ ಮತ್ತು ಸುಖಾಸುಮ್ಮನೆ ಪ್ರಕರಣಗಳನ್ನು ದಾಖಲಿಸದಂತೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ರುದ್ರಪ್ಪ ಲಮಾಣಿ ಅವರನ್ನು
ಸಮಾಧಾನಪಡಿಸಿ, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಅರಣ್ಯ ಇಲಾಖೆಯ ಡಿಎಫ್‌ಒಗೆ ನಿರ್ದೇಶನ ನೀಡಿದರು.

About The Author