Haveri News: ಯೋಧ ಯಶೋಧರ್ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

Haveri News: ಕೇರಳದ ಕೊಚ್ಚಿಯಲ್ಲಿ ಸೇವೆಯಲ್ಲಿದ್ದ ವೇಳೆ ಅಕಾಲಿಕವಾಗಿ ನಿಧನರಾದ ಭಾರತೀಯ ನೌಕಾದಳದ ಯೋಧ, ತಾಲೂಕಿನ ಉಪ್ಪುಣಸಿ ಗ್ರಾಮದ ಯಶೋಧರ ದುರುಗಪ್ಪ ವಡ್ಡರ ಅವರ ಪಾರ್ಥಿವ ಶರೀರಕ್ಕೆ ಶಾಸಕ ಶ್ರೀನಿವಾಸ ಮಾನೆ ಮಾಜಿ ಶಾಸಕ ಶಿವರಾಜ್ ಸಜ್ಜನ್ ಜನಪ್ರತಿನಿಧಿಗಳು, ಮಾಜಿ ಯೋಧರು ಅಂತಿಮ ನಮನ ಸಲ್ಲಿಸಿ, ಗೌರವಾರ್ಪಿಸಿದರು.

ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿ ಬಳಿಕ ಮೃತ ಯೋಧನ ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ದುಃಖದ ಸಂದರ್ಭದಲ್ಲಿ ಕುಟುಂಬದ ನೋವಿನಲ್ಲಿ ತಾವು ಸಹ ಭಾಗಿಯಾಗಿದ್ದು, ಧೈರ್ಯದಿಂದ ಇರುವಂತೆ ಸಮಾಧಾನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿದ್ದ ಉಪ್ಪುಣಸಿ ಗ್ರಾಮದ ಯೋಧನ ಅಗಲಿಕೆ ಅತ್ಯಂತ ದುಃಖಕರ ಸಂಗತಿ. ದೇಶಕ್ಕಾಗಿ ಬದುಕಿದ ಅವರ ಸೇವೆ ಮತ್ತು ತ್ಯಾಗ ಸದಾ ಸ್ಮರಣೀಯ. ಇಂತಹ ಹೆಮ್ಮೆಯ ಯೋಧನನ್ನು ಕಳೆದುಕೊಂಡ ಕುಟುಂಬದ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮಾಜಿ ಯೋಧರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು.

About The Author