Haveri News: ಹಾವೇರಿ : ಉತ್ತರ ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರ ಮನಸ್ಸನ್ನು ಸಮಿತಿಗಳು ಸೆಳೆಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶ ಮಂಡಳಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸುತ್ತಿವೆ. ಗಣೇಶ ಸಮಿತಿ ಸದಸ್ಯರು ಭಕ್ತರ ದಾನಿಗಳನ್ನು ಕರೆದು ಅನ್ನಪ್ರಸಾದ ನೀಡಲು ಆರಂಭಿಸಿ ದಶಕಗಳಾಗಿವೆ.
ಡಿಜೆ ಬದಲು ಹೋಳಿಗೆ ಊಟ: ಕೆಲ ವರ್ಷಗಳಿಂದ ಗಣೇಶನ ಆಗಮನ ಮತ್ತು ನಿಮಜ್ಜನಕ್ಕೆ ಡಿಜೆ ಸಹ ಕಾಲಿಟ್ಟಿತ್ತು. ಗಣೇಶನನ್ನು ತರುವಾಗ ಇಲ್ಲದ ಡಿಜೆ ಗಣೇಶ ಕಳಿಸುವಾಗ ಅನಿವಾರ್ಯ ಎನ್ನುವಂತಾಗಿತ್ತು. ಇದಕ್ಕೆ ಹಾವೇರಿ ಜಿಲ್ಲೆ ಹೊರತಾಗಿಲ್ಲ. ಆದರೆ, ಪ್ರಸ್ತುತ ವರ್ಷ ಜಿಲ್ಲಾಡಳಿತ ಡಿ. ಜೆ. ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಡಿಜೆ ಬಳಕೆ ಮಾಡಿದ ಸಮಿತಿ ಮತ್ತು ಸೌಂಡ್ ಸಿಸ್ಟಮ್‌ಗಳ ಮೇಲೆ ಎಫ್ಐಆರ್ ಸಹ ದಾಖಲಿಸಿದೆ.
ಒಂದು ಕಡೆ ಶಬ್ಧಮಾಲಿನ್ಯ, ಮತ್ತೊಂದು ಕಡೆ ಡಿ. ಜೆ. ಬಳಕೆಗೆ ಗಣೇಶ ಸಮಿತಿಗಳು ಆರ್ಥಿಕ ಹೊರೆಯನ್ನು ತೆರಬೇಕಾಗಿತ್ತು. ಆದರೆ, ಇದೇ ಹಣವನ್ನು ಸಾವಿರಾರು ಭಕ್ತರಿಗೆ ಊಟ ಬಡಿಸಿದರೆ ಹೇಗಿರುತ್ತೆ ಅಂತಾ ಹಾವೇರಿ ನಾಗೇಂದ್ರನಮಟ್ಟಿ ಕಾ ರಾಜಾ ಸಮಿತಿಯ ಸದಸ್ಯರಿಗೆ ಐಡಿಯಾ ಬಂದಿದೆ. ಅವರು ಕೇವಲ ಅನ್ನಸಂತರ್ಪಣೆ ಮಾತ್ರವಲ್ಲ, ಭಕ್ತರಿಗೆ ಹೋಳಿಗೆ ಊಟ ಹಾಕಿಸೋಣ ಎಂದು ನಿರ್ಧರಿಸಿದ್ದರು.
ಐದು ಸಾವಿರ ಜನರಿಗೆ ಹೋಳಿಗೆ ಊಟ: ರವಿವಾರ ಮಧ್ಯಾಹ್ನ ಹಾವೇರಿಯ ನಾಗೇಂದ್ರನಮಟ್ಟಿ ಕಾ ರಾಜಾ ಗಣಪತಿ ಸಮಿತಿ ಭಕ್ತರಿಗೆ ಹೋಳಿಗೆ, ಚಿತ್ರಾನ್ನ, ಬದನೆಕಾಯಿ ಪಲ್ಯೆ, ಅನ್ನ ಸಾಂಬಾರು ವಿತರಣೆ ಮಾಡಿತು. ಹಾವೇರಿಯ ನಾಗೇಂದ್ರನಮಟ್ಟಿ ನಿವಾಸಿಗಳು, ಅಕ್ಕಪಕ್ಕದ ಗ್ರಾಮಗಳ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸೇವಿಸಿದರು. ಸೋಮವಾರ 13 ದಿನಕ್ಕೆ ಗಣೇಶನ ವಿಸರ್ಜನೆ ಮಾಡಲಾಗುತ್ತದೆ. ಹೀಗಾಗಿ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಕಲಾತಂಡಗಳನ್ನು ಸಮಿತಿ ಆಮಂತ್ರಿಸಿದೆ.