Haveri News: ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಬರಿದಾಗಿದ್ದ ರಾಣೇಬೆನ್ನೂರ ತಾಲೂಕಿನ ತುಂಗಭದ್ರ ನದಿಗಳಿಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಪರಿಣಾಮ ದಿಢೀರನೆ ನೀರಿನ ಹರಿವು ಹೆಚ್ಚಾಗಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ರೈತಾಪಿ ವರ್ಗದಲ್ಲಿ ಹೊಸ ಆಶಾಭಾವನೆ ಮೂಡಿದ್ದು, ಜನಜಾನುವಾರುಗಳಿಗೂ ಜೀವಕಳೆ ಬಂದಂತಾಗಿದೆ.
ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ, ಮೇಡ್ಲೇರಿ, ಹಿರೇಬಿದರಿ, ಕುದರಿಹಾಳ,ಹರನಗಿರಿ, ಚಿಕ್ಕಕುರವತ್ತಿ, ಚಂದಾಪುರ,ಬೇಲೂರು ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವ ದೃಶ್ಯ ಸ್ಥಳೀಯರ ಗಮನ ಸೆಳೆದಿದೆ.
ಇತ್ತೀಚಿನ ದಿನಗಳಲ್ಲಿ ನದಿ ಪಾತ್ರ ಸಂಪೂರ್ಣ ಬತ್ತಿಹೋಗಿದ್ದರಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಆದರೆ ಭದ್ರಾ ಡ್ಯಾಂನಿಂದ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಮತ್ತೆ ನೀರಿನ ಹರಿವು ಕಾಣಿಸಿಕೊಂಡಿದೆ. ನದಿಯಲ್ಲಿ ನೀರು ಹರಿಯಲಾರಂಭಿಸಿರುವುದರಿಂದ ರೈತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.




