ರಾಜ್ಯ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ನಡುವಿನ ರಾಜಕೀಯ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ವಿರುದ್ಧ ಗನ್ ತೋರಿಸಿ ಬೆದರಿಕೆ ಹಾಕಿರುವ ಗಂಭೀರ ಆರೋಪ ಮಾಡಿದ್ದ ಎಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ಅತ್ಯಂತ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಕುಮಾರಸ್ವಾಮಿ ಅವರ ಹಿಟ್ ಅಂಡ್ ರನ್ ರಾಜಕಾರಣವನ್ನು ಕಟುವಾಗಿ ಟೀಕಿಸಿದರು. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ತಮ್ಮ ಸ್ವಂತ ಧರ್ಮಪತ್ನಿ, ಪಿಎಗಳು ಹಾಗೂ ನಿಕಟವರ್ತಿಗಳು ಸೇರಿದಂತೆ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿಸಿದ ಕೀರ್ತಿ ಹೊಂದಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಸ್ವಂತ ಹೆಂಡತಿಯನ್ನೇ ನಂಬದ ಇಂತಹ ವ್ಯಕ್ತಿ ಸಮಾಜವನ್ನು ಹೇಗೆ ನಂಬಲು ಸಾಧ್ಯ ಎಂದು ಬಾಲಕೃಷ್ಣ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಗಡಿಯ ಪ್ರಬುದ್ಧ ಮತದಾರರು ತಮ್ಮ ಸೇವೆಯನ್ನು ಮೆಚ್ಚಿ ಐದು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ ಬಾಲಕೃಷ್ಣ, ಕೇಂದ್ರದಲ್ಲಿ ಮಾಡಲು ಕೆಲಸವಿಲ್ಲದೆ ಕುಮಾರಸ್ವಾಮಿ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ತಮ್ಮ ವಿರುದ್ಧ ಮಾಡಲಾಗಿರುವ ಗನ್ ಪಾಯಿಂಟ್ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ತಮ್ಮ ಬಳಿ ಯಾವುದೇ ಬಂದೂಕು ಇಲ್ಲ, ಲೈಸೆನ್ಸ್ ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಗನ್ ಅಥವಾ ಕತ್ತಿ ತೋರಿಸಿ ಹೆದರಿಸುವ ರಾಜಕಾರಣ ಮಾಡಿಲ್ಲ ಎಂದ ಸಚಿವರು, ಕುಮಾರಸ್ವಾಮಿಗೆ ಮುಖಾಮುಖಿ ಚರ್ಚೆಗೆ ಬರುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಅವರ ತಟ್ಟೆಯಲ್ಲಿ ಬೃಹತ್ ಹೆಗ್ಗಣವೇ ಸತ್ತು ಬಿದ್ದಿದೆ, ಆದರೆ ನನ್ನ ತಟ್ಟೆಯಲ್ಲಿರುವ ಸಣ್ಣ ಇರುವೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮಾಜಿ ಮುಖ್ಯಮಂತ್ರಿಗಳೆಂಬ ಗೌರವದಿಂದ ತಾವಿಷ್ಟು ಮಾತನಾಡುತ್ತಿದ್ದು, ತಮ್ಮ ಬಳಿ ಧಮ್ಮು-ತಾಕತ್ತು ತೋರಿಸಲು ಬಂದರೆ ಕ್ಯಾರೇ ಎನ್ನುವುದಿಲ್ಲ ಎಂದು ಬಾಲಕೃಷ್ಣ ನೇರ ಎಚ್ಚರಿಕೆ ನೀಡಿದ್ದಾರೆ.
