ಬೆಂಗಳೂರು: ಸರ್ಕಾರ ಪತನವಾಗಿರುವ ಬೆನ್ನಲ್ಲೇ ಹಂಗಾಮಿ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರೋ ಕುಮಾರಸ್ವಾಮಿ ಇದೀಗ ತಮ್ಮ ಸ್ಥಾನದಿಂದ ಕೆಳೆಗಿಳಿಯುವ ಕೊನೇ ಕ್ಷಣದಲ್ಲಿ ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸಿಎಂ ತಮ್ಮ ಆಡಳಿತಾವಧಿಯ ಕೊನೆಯ ಅಧಿಸೂಚನೆ ಹೊರಡಿಸಿದ್ದಾರೆ.
ರಾಜ್ಯದ ಜನರಿಗೆ ಗಿಫ್ಟ್ ನೀಡ್ತೇನೆ ಅಂತ ಅಧಿಕಾರಕ್ಕೇರಿದ ಆರಂಭದ ದಿನಗಳಲ್ಲಿ ಹೇಳಿದ್ದ ಕುಮಾರಸ್ವಾಮಿ ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಋಣಮುಕ್ತ ಕಾಯ್ದೆ ಜಾರಿಗೊಳಿಸಿ ಅಧಿಸೂಚನೆ ಹೊರಡಿಸೋ ಮೂಲಕ ದುರ್ಬಲ ವರ್ಗದವರಿಗೆ ಕುಮಾರಸ್ವಾಮಿ ನೆರವಾಗಿದ್ದಾರೆ. ಈ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಚ್.ಡಿ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಯಾರೂ ಊಹೆ ಮಾಡಲಾಗದಂಹ ಅಸ್ಥಿರತೆವುಂಟಾಗಲಿದೆ ಅಂತ ಭವಿಷ್ಯ ನುಡಿದ್ರು. ಬಳಿಕ ಮಾತನಾಡಿದ ಅವರು,ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಲಾಗಿದ್ದು, ಖಾಸಗಿ ಲೇವಾದೇವಿಗಾರರಿಂದ ಬಡ್ಡಿಗೆ ಪಡೆದ ಸಾಲವನ್ನು ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ದಾರೆ.
ಈ ಕಾಯ್ಡೆಯಡಿ ಭೂಮಿ ಇಲ್ಲದ ರೈತರು, 2 ಹೆಕ್ಟೇರ್ ಜಮೀನಿಗಿಂತ ಕಡಿಮೆ ಜಮೀನು ಹೊಂದಿರುವವರು, ವಾರ್ಷಿಕ ವರಮಾನ 1.20ಲಕ್ಷ ಮೀರದ ದುರ್ಬಲ ವರ್ಗದವರಿಗೆ ಅನ್ವಯವಾಗಲಿದೆ ಅಂತ ಮಾಹಿತಿ ನೀಡಿದ ಹಂಗಾಮಿ ಸಿಎಂ, ಈ ಕುರಿತು ರಾಷ್ಟ್ರಪತಿಯವರು ಅಂಕಿತ ಹಾಕಿದ್ದು ನಿನ್ನೆಯೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು. ಇನ್ನು ಮುಂದಿನ 90 ದಿನಗಳೊಳಗಾಗಿ ಸಾಲ ಪಡೆದಿರುವ ಕುರಿತಾಗಿ ದಾಖಲೆ, ಮಾಹಿತಿಗಳನ್ನು ಸಂಬಂಧಿಸಿದ ಪ್ರದೇಶದ ನೋಡಲ್ ಅಧಿಕಾರಿಗಳು/ ಅಸಿಸ್ಟೆಂಟ್ ಕಮೀಷನರ್ ರಿಗೆ ಸಲ್ಲಿಸಬೇಕು ಎಂದರು. ಇನ್ನು ಜಮೀನು, ಒಡವೆ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಗಿರವಿ ಇಟ್ಟು ಸಾಲ ತೆಗೆದುಕೊಂಡವರೂ ಈ ಯೋಜನೆಗೆ ಒಳಪಡಲಿದ್ದು, ನಿನ್ನೆಯವರೆಗೂ ಯಾರೇ ಸಾಲ ಮಾಡಿದ್ದರೂ ಸಹ ಅದು ಮನ್ನಾ ಆಗಲಿದೆ ಅಂತ ಸಿಎಂ ಮಾಹಿತಿ ನೀಡಿದ್ರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿದ್ದು, ಬಡವರಿಗೆ ಉಪಯೋಗವಾಗುವಂತೆ ಯೋಜನೆ ಜಾರಿಗೆ ತಂದಿದ್ದೇವೆ. ಹೀಗಾಗಿ ಯೋಜನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಅಂತ ಅಧಿಕಾರಿಗಳಿಗೂ ಸೂಚನೆ ನೀಡಿರುವೆ. ಅಲ್ಲದೆ ನನ್ನ ಅಧಿಕಾರಾವಧಿಯ ಕೊನೆಯ ಕ್ಷಣದಲ್ಲಿ ಈ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವುದು ನನಗೆ ತೃಪ್ತಿ ನೀಡಿದೆ ಅಂತ ಕುಮಾರಸ್ವಾಮಿ ಇದೇ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.