ಬಿಡದಿ ಟೌನ್ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಎಂಟ್ರಿಯಾಗಿದ್ದಾರೆ. ರೈತರ ಹೋರಾಟಕ್ಕೆ ಜೆಡಿಎಸ್ ಬೆಂಬಲ ಘೋಷಿಸಿದ್ದು, ಪ್ರತಿಭಟನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿದ್ದಾರೆ. ಜೆಡಿಎಸ್ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಡಿಕೆ ಭಾಗಿಯಾಗಿದ್ರು. ಈ ವೇಳೆ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ.
ಡಿ.ಕೆ. ಶಿವಕುಮಾರ್ ಏನೇನು ಆಟ ಆಡಿದ್ದಾರೆಂದು ಗೊತ್ತಿದೆ. ನಮ್ಮ ಕುಟುಂಬವನ್ನು ಮುಗಿಸುವುದಕ್ಕೆ, ಹೇಗೆಲ್ಲಾ ನಡೆದುಕೊಂಡಿದ್ದೀರಿ ಅನ್ನೋದು ಗೊತ್ತಿದೆ. ಭಗವಂತನನ್ನ ನಂಬಿದ್ದೇನೆ. ಆತ ನಿಮಗೆ ಶಿಕ್ಷೆ ಕೊಡ್ತಾನೆ. ರಾಕ್ಷಸ ಅನ್ನುವ ಪದವನ್ನು ನಿಖಿಲ್ ಬಳಸಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ. ರೈತರನ್ನು ಒಕ್ಕಲೆಬ್ಬಿಸಿ ಸರ್ವೇ ಕಾರ್ಯ ಮಾಡುತ್ತೇನೆಂದ್ರೆ, ಮುಂದೆ ಪ್ರಾಯಶ್ಚಿತ ಪಡಬೇಕಾಗುತ್ತದೆ. ಪೊಲೀಸರಿಗೆ ಎಚ್ಚರಿಕೆ ಕೊಡ್ತಿದ್ದೇನೆ. ಸಣ್ಣ ಲೋಪಕ್ಕೆ ಎಡೆ ಮಾಡಿಕೊಟ್ರು ಖುದ್ದು ನಾನೇ ಬರ್ತೇನೆ. ಜನತಾದಳ ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ.
ಟೌನ್ಶಿಪ್ ವಿಚಾರದಲ್ಲಿ ನನ್ನ ಮೇಲೂ ಕೆಲವು ಅಪವಾದ ಬಂದಿದೆ. ರೈತ ಕುಟುಂಬಗಳ್ನು ಒಕ್ಕಲೆಬ್ಬಿಸುವ ಕೆಲಸವನ್ನು, ಕುಮಾರಸ್ವಾಮಿ ಮಾಡಿದ್ದಾರೆಂದು, ಆರೋಪ ಮಾಡಿದ್ದಾರೆ. ಸುಮಾರು 3ರಿಂದ 4 ಬಾರಿ ಕೃಷ್ಣ ಕಚೇರಿಯಲ್ಲಿ, ಹಲವು ಸಭೆ ಮಾಡಿದ್ದೇನೆ. ಹಿರಿಯರ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಕೆಲವು ತಾಯಂದಿರು ನನ್ನ ಮುಂದೆ ಪ್ರಶ್ನೆ ಇಟ್ಟಿದ್ರು. ನಿಮ್ಮನ್ನು ಗೆಲ್ಲಿಸಿದ್ದಕ್ಕೆ, ನಿಮ್ಮ ನಿರ್ಧಾರದಿಂದ ನಮ್ಮನ್ನು ಊರು ಖಾಲಿ ಮಾಡಿಸುತ್ತೀಯಾ ಅಂತಾ ಪ್ರಶ್ನಿಸಿದ್ರು. ಈಗಲೂ ಅದು ನನ್ನ ಮನಸ್ಸಿನಲ್ಲಿದೆ.
ಬೆಂಗಳೂರು-ಮೈಸೂರು ರಸ್ತೆ ವಿಷಯದಲ್ಲಿ, ದೇವೇಗೌಡರು ತೀರ್ಮಾನ ಮಾಡಿದ್ರು. ಬಳಿಕ ದಿಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಬಂತು. ಕಾಂಗ್ರೆಸ್ ಸರ್ಕಾರ ಬಂದಾಗ ಇದೇ ಶಿವಕಮಾರ್, ಒಂದು ಪ್ರಾಧಿಕಾರ ರಚನೆ ಮಾಡಿ, ಅಧ್ಯಕ್ಷರೂ ಅವರೇ ಆದ್ರು. ಆಗ ಒಂದೂಮುಕ್ಕಾಲು ಎಕರೆ ಭೂಮಿ ವಶಪಡಿಸಿಕೊಳ್ಳಲು ಮುಂದಾಗ್ತಾರೆ. 30 ವರ್ಷ ಆದ್ರೂ ಆಗಲಿಲ್ಲ. ಇದೇ ಶಿವಕುಮಾರ್ ಬೆಂಗಳೂರಿನ ಹೊಸಕೆರೆ ಹಳ್ಳಿ ಮತ್ತು ಸುತ್ತಮುತ್ತ, ಎಷ್ಟು ಭೂಮಿಯನ್ನು ಲಪಟಾಯಿಸಿದ್ದಾರೆ. ದೇವೇಗೌಡ್ರು ರೈತರ ಪರವಾಗಿ ದನಿ ಎತ್ತಿದ್ದಾರೆ.
2006ರಲ್ಲಿ 60 ಸಾವಿರ ಕೋಟಿ ಬಂಡವಾಳ ಹಾಕಬೇಕೆಂದುಕೊಂಡಿದ್ದೆ. ರೈತರಿಗೆ ಅನುಕೂಲವಾಗಬೇಕೆಂದು ಕೊಂಡಿದ್ದೆ. ನನ್ನ ಬೆಳೆಸಿರುವ ರೈತರಿಗೆ, ನನ್ನ ಜೀವನದ ಕೊನೆ ಉಸಿರು ಇರೋವರೆಗೆ ಅನ್ಯಾಯ ಮಾಡಲ್ಲ. 9 ಸಾವಿರ ಎಕರೆಯಲ್ಲಿ ಮೂರುವರೆಯಿಂದ, 4 ಸಾವಿರ ಎಕರೆ ಸರ್ಕಾರಿ ಭೂಮಿ ಇದೆ ಎಂಬ ಮಾಹಿತಿ ಇತ್ತು. ಆದ್ರೀಗ 700 ಎಕರೆ ಇದೆ ಅಂತಾ ತೋರಿಸುತ್ತಿದ್ದಾರೆ. ಅಧಿಕಾರಿಗಳೆಲ್ಲಾ ಸೇರಿ ಲೂಟಿ ಹೊಡೆದಿದ್ದಾರೆಂಬ ಮಾಹಿತಿ ನನ್ನ ಬಳಿ ಇದೆ.
ಟೌನ್ಶಿಪ್ ಹೆಸರಲ್ಲಿ ಲೂಟಿ ಕೆಲಸ ಆಗ್ತಿದೆ. ಆದರೆ ಶಿವಕುಮಾರ್ ನಮ್ಮ ಮೇಲೆಯೇ ದೂರುತ್ತಾರೆ. ಬ್ರಾಹ್ಮಣ ಕೃಷ್ಣಮೂರ್ತಿ ಎಂಬುವರು, ಲೋನ್ ಪಡೆದು ಹೋಟೆಲ್ ಹಾಕಿಕೊಂಡಿದ್ರು. ಕಡಿಮೆ ದುಡ್ಡಿಗೆ ಖರೀದಿಸಿ, ಹೋಟೆಲ್ ಖಾಲಿ ಮಾಡಿಸಿ, ಅದೇ ಜಾಗದಲ್ಲಿ ಸ್ಕೂಲ್ ಕಟ್ಟಿದ್ದಾರೆ. ರಾಮಸ್ವಾಮಿ ಮಿಲಿಟರಿಯಿಂದ ಬಂದಿದ್ರು. ಅವರ ಮಗಳನ್ನು ಕಿಡ್ನ್ಯಾಪ್ ಮಾಡಿ ಜಮೀನು ಬರೆಸಿಕೊಂಡಿದ್ದಾರೆ. ಇಂಥಾ ವ್ಯಕ್ತಿಗಳು ನನ್ನ ಮೇಲೆ, ದೇವೇಗೌಡರ ಮೇಲೆ ಕಾಮೆಂಟ್ ಮಾಡುವ ನೈತಿಕತೆ ಇಟ್ಟುಕೊಂಡಿದ್ದಾರಾ? ಹೀಗಂತ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ನಿಖಿಲ್ ನಿಮ್ಮ ಮಗ. ದನಿ ಎತ್ತಿ ನನ್ನ ಪರವಾಗಿ ಬಂದಿದ್ದಾನೆ. ಒಂದಿಂಚೂ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಅಂತಾ ಹೇಳಿದ್ದೇನೆ. ಅದಕ್ಕೆ ನನ್ನ ಬೆಂಬಲವೂ ಇದೆ. ಬೆಂಗಳೂರಿಗೆ ಪಾದಯಾತ್ರೆ ಮಾಡುವ ಸಂದರ್ಭ ಬಂದ್ರೆ, ನಾನೂ ನಿಮ್ಮ ಜೊತೆ ಭಾಗಿಯಾಗುತ್ತೇನೆ. ನನ್ನ ಆರೋಗ್ಯ ಮುಖ್ಯವಲ್ಲ. ನನ್ನನ್ನು ಬೆಳೆಸಿದ ಜನರೇ ಮುಖ್ಯ. ರೈತರಿಗೆ ತೊಂದರೆಯಾಗಲು ಬಿಡೋದಿಲ್ಲ. ನಿಮ್ಮ ಕಣ್ಣುಗಳು ಎಂದೂ ನೀರಾಕಬಾರದು. ನನ್ನ ಮೇಲೆ ನಂಬಿಕೆ ಇಡಿ ಅಂತಾ ಹೆಚ್ಡಿಕೆ ಧೈರ್ಯ ತುಂಬಿದ್ದಾರೆ.

